ಅರಕೇರಾ, ನ.7: ಅರಕೇರಾ ತಾಲೂಕು ವ್ಯಾಪ್ತಿಗೆ ಒಳಪಟ್ಟಿರುವ ಗಾಣದಾಳ ಗ್ರಾಮ ಪಂಚಾಯಿತಿಯ ಗಾಣದಾಳ, ಕಮಲದಿನ್ನಿ, ಕಕ್ಕಲದೊಡ್ಡಿ ಹಾಗೂ ಸುಣ್ಣದಕಲ್ ಗ್ರಾಮಗಳನ್ನು ದೇವದುರ್ಗ ತಾಲೂಕಿಗೆ ಮರುಸೇರ್ಪಡೆಗೊಳಿಸಬೇಕು ಎಂದು ಆಗ್ರಹಿಸಿ ನಡೆದ ಜನಾಭಿಪ್ರಾಯ ಸಂಗ್ರಹ ಸಭೆಯಲ್ಲಿ 1,662ಕ್ಕೂ ಹೆಚ್ಚು ಗ್ರಾಮಸ್ಥರು ಭಾಗವಹಿಸಿ ಬೇಡಿಕೆಗೆ ಬೆಂಬಲ ವ್ಯಕ್ತಪಡಿಸಿದರು.
ಶನಿವಾರ ಬೆಳಗ್ಗೆ 11 ಗಂಟೆಗೆ ಗಾಣದಾಳ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಅರಕೇರಾ ತಹಶೀಲ್ದಾರ್ ಗ್ರೇಡ್-2 ಶ್ರೀಧರ ಪವಾರ್ ಅವರ ನೇತೃತ್ವದಲ್ಲಿ ಜನಾಭಿಪ್ರಾಯ ಸಂಗ್ರಹ ಸಭೆ ನಡೆಯಿತು. ನಾಲ್ಕು ಗ್ರಾಮಗಳ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು, ಕೈ ಎತ್ತುವ ಮೂಲಕ ದೇವದುರ್ಗ ತಾಲೂಕಿಗೆ ಮರುಸೇರ್ಪಡೆಗೊಳಿಸುವ ಬೇಡಿಕೆಗೆ ಬೆಂಬಲ ಸೂಚಿಸಿದರು.
ಸಭೆಯಲ್ಲಿ ಗ್ರಾಮಸ್ಥರ ಅಭಿಪ್ರಾಯಗಳನ್ನು ಆಲಿಸಿದ ತಹಶೀಲ್ದಾರ್ ಶ್ರೀಧರ ಪವಾರ್, ಸಾರ್ವಜನಿಕರ ಅಭಿಪ್ರಾಯಗಳು ಹಾಗೂ ಸಭೆಯ ನಡಾವಳಿಯನ್ನು ಸಂಬಂಧಪಟ್ಟ ಮೇಲಧಿಕಾರಿಗಳಿಗೆ ಸಲ್ಲಿಸಲಾಗುವುದು ಎಂದು ತಿಳಿಸಿದರು.
ಅರಕೇರಾ ತಾಲೂಕು ಕೇಂದ್ರದಿಂದ ಗಾಣದಾಳ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗ್ರಾಮಗಳು ಸುಮಾರು 40ರಿಂದ 60 ಕಿ.ಮೀ. ದೂರದಲ್ಲಿವೆ. ಇದರಿಂದ ಕಂದಾಯ ದಾಖಲೆಗಳು, ಪಿಂಚಣಿ ಸೌಲಭ್ಯಗಳು ಹಾಗೂ ವಿವಿಧ ಸರ್ಕಾರಿ ಸೇವೆಗಳನ್ನು ಪಡೆಯಲು ರೈತರು, ಮಹಿಳೆಯರು, ವೃದ್ಧರು ಮತ್ತು ಸಾರ್ವಜನಿಕರು ತೀವ್ರ ತೊಂದರೆ ಅನುಭವಿಸುತ್ತಿದ್ದಾರೆ ಎಂದು ಗ್ರಾಮಸ್ಥರು ಅಳಲು ತೋಡಿಕೊಂಡರು.
ವಿಶೇಷವಾಗಿ ಸಮರ್ಪಕ ಸಾರಿಗೆ ವ್ಯವಸ್ಥೆಯ ಕೊರತೆಯಿಂದ ತಾಲೂಕು ಕೇಂದ್ರಕ್ಕೆ ತೆರಳಿ ಸರ್ಕಾರಿ ಕೆಲಸಗಳನ್ನು ಮುಗಿಸಿಕೊಂಡು ಹಿಂದಿರುಗುವುದು ಕಷ್ಟಕರವಾಗಿದೆ. ಸಣ್ಣಪುಟ್ಟ ಕೆಲಸಗಳಿಗೂ ದೂರದ ಪ್ರಯಾಣ ಮಾಡಬೇಕಾಗಿರುವುದರಿಂದ ಸಮಯ ಹಾಗೂ ಹಣ ವ್ಯರ್ಥವಾಗುತ್ತಿದೆ ಎಂದು ವಿವರಿಸಿದರು.
ಇದಕ್ಕೆ ವಿರುದ್ಧವಾಗಿ ಗಾಣದಾಳದಿಂದ ಜಾಲಹಳ್ಳಿಗೆ ಕೇವಲ 6 ಕಿ.ಮೀ., ಕಮಲದಿನ್ನಿಯಿಂದ 3 ಕಿ.ಮೀ., ಕಕ್ಕಲದೊಡ್ಡಿಯಿಂದ 4 ಕಿ.ಮೀ. ಹಾಗೂ ಸುಣ್ಣದಕಲ್ನಿಂದ ಸುಮಾರು 10 ಕಿ.ಮೀ. ಅಂತರವಿದೆ. ದೇವದುರ್ಗ ತಾಲೂಕಿನ ಜಾಲಹಳ್ಳಿ ಹೋಬಳಿ ಕೇಂದ್ರವು ಈ ಗ್ರಾಮಗಳಿಗೆ ಭೌಗೋಳಿಕವಾಗಿ ಸಮೀಪದಲ್ಲಿದ್ದು, ಸಾರ್ವಜನಿಕರ ದೈನಂದಿನ ವ್ಯವಹಾರಗಳಿಗೂ ಅನುಕೂಲಕರವಾಗಿದೆ ಎಂದು ತಿಳಿಸಿದರು.
ಜಾಲಹಳ್ಳಿಯಲ್ಲಿ ಸಮುದಾಯ ಆರೋಗ್ಯ ಕೇಂದ್ರ, ಪೊಲೀಸ್ ಠಾಣೆ, ಪಶು ಚಿಕಿತ್ಸಾಲಯ, ಶಾಲಾ-ಕಾಲೇಜುಗಳು, ಬ್ಯಾಂಕ್ಗಳು, ವಿದ್ಯುತ್ ಕೇಂದ್ರ ಸೇರಿದಂತೆ ಅಗತ್ಯ ಮೂಲಸೌಕರ್ಯಗಳಿವೆ. ರಾಷ್ಟ್ರೀಯ ಹಾಗೂ ರಾಜ್ಯ ಹೆದ್ದಾರಿಗಳ ಸಂಪರ್ಕವೂ ಇರುವುದರಿಂದ ಈ ಗ್ರಾಮಗಳನ್ನು ದೇವದುರ್ಗ ತಾಲೂಕಿಗೆ ಸೇರಿಸುವುದು ಆಡಳಿತಾತ್ಮಕವಾಗಿಯೂ ಜನಸಾಮಾನ್ಯರ ಹಿತದೃಷ್ಟಿಯಿಂದಲೂ ಸೂಕ್ತವಾಗಿದೆ ಎಂದು ಗ್ರಾಮಸ್ಥರು ಪ್ರತಿಪಾದಿಸಿದರು.
ವೃದ್ಧಾಪ್ಯ ವೇತನ, ವಿಧವಾ ವೇತನ, ಸಂಧ್ಯಾ ಸುರಕ್ಷಾ ಯೋಜನೆ ಸೇರಿದಂತೆ ವಿವಿಧ ಸಾಮಾಜಿಕ ಭದ್ರತಾ ಯೋಜನೆಗಳ ಫಲಾನುಭವಿಗಳು ಅರಕೇರಾ ತಾಲೂಕು ಕೇಂದ್ರಕ್ಕೆ ತೆರಳಲು ತೊಂದರೆ ಎದುರಿಸುತ್ತಿದ್ದಾರೆ. ವಿಶೇಷವಾಗಿ ವೃದ್ಧರು, ಅಂಗವಿಕಲರು ಹಾಗೂ ಮಹಿಳೆಯರಿಗೆ ದೂರದ ಪ್ರಯಾಣ ಸಮಸ್ಯೆಯಾಗಿದ್ದು, ಸರ್ಕಾರ ಈ ಕುರಿತು ಗಂಭೀರವಾಗಿ ಪರಿಗಣಿಸಬೇಕು ಎಂದು ಒತ್ತಾಯಿಸಿದರು.
ಕರ್ನಾಟಕ ಪಂಚಾಯತ್ ರಾಜ್ ಅಧಿನಿಯಮ 1993ರ ಸೆಕ್ಷನ್ 4(2)(ಎ) ಹಾಗೂ ಸಂಬಂಧಪಟ್ಟ ಕಾನೂನು ನಿಯಮಗಳ ಅನ್ವಯ ಗ್ರಾಮಗಳ ಮರುಸೇರ್ಪಡೆ ಬೇಡಿಕೆಯನ್ನು ಪರಿಶೀಲಿಸಿ ಸೂಕ್ತ ನಿರ್ಧಾರ ಕೈಗೊಳ್ಳಬೇಕು ಎಂದು ಸಭೆಯಲ್ಲಿ ಆಗ್ರಹಿಸಲಾಯಿತು.
ಸಭೆಯಲ್ಲಿ ಮಾತನಾಡಿದ ಮುಖಂಡ ರಂಗಣ್ಣ ಕೋಲ್ಕಾರ್, ಅರಕೇರಾ ತಾಲೂಕು ರಚನೆಯ ಸಂದರ್ಭದಲ್ಲಿ ಗ್ರಾಮಗಳ ಭೌಗೋಳಿಕ ಅಂತರ ಹಾಗೂ ಸಾರ್ವಜನಿಕರ ಅನುಕೂಲವನ್ನು ಸಮರ್ಪಕವಾಗಿ ಪರಿಗಣಿಸಿಲ್ಲ ಎಂದು ಆಕ್ಷೇಪ ವ್ಯಕ್ತಪಡಿಸಿದರು. ಅವೈಜ್ಞಾನಿಕ ತಾಲೂಕು ವಿಂಗಡಣೆಯಿಂದ ಗ್ರಾಮೀಣ ಜನತೆ ತೊಂದರೆ ಅನುಭವಿಸುವಂತಾಗಿದೆ ಎಂದು ಆರೋಪಿಸಿದರು.
ಮುಖಂಡ ಗಿರಿಯಪ್ಪ ಪೂಜಾರಿ ಮಾತನಾಡಿ, ಗಾಣದಾಳ ಗ್ರಾಮ ಪಂಚಾಯಿತಿ ವ್ಯಾಪ್ತಿಯ ನಾಲ್ಕು ಗ್ರಾಮಗಳನ್ನು ವಿಳಂಬ ಮಾಡದೆ ದೇವದುರ್ಗ ತಾಲೂಕಿಗೆ ಮರುಸೇರ್ಪಡೆಗೊಳಿಸಬೇಕು. ಸರ್ಕಾರ ಜನರ ಅಭಿಪ್ರಾಯಕ್ಕೆ ಆದ್ಯತೆ ನೀಡಬೇಕು ಎಂದು ಒತ್ತಾಯಿಸಿದರು.
ಸಿದ್ಧನಗೌಡ ಮೂಡಲಗುಂಡ ಮಾತನಾಡಿ, ಗ್ರಾಮಗಳ ಭೌಗೋಳಿಕ ಪರಿಸ್ಥಿತಿ, ರಸ್ತೆ ಸಂಪರ್ಕ, ಸಾರಿಗೆ ವ್ಯವಸ್ಥೆ ಹಾಗೂ ಸಾರ್ವಜನಿಕರ ದೈನಂದಿನ ಅಗತ್ಯಗಳನ್ನು ಗಮನದಲ್ಲಿಟ್ಟುಕೊಂಡು ತಾಲೂಕು ಮರುವಿಂಗಡಣೆ ಮಾಡಬೇಕು. ಅವೈಜ್ಞಾನಿಕ ವರದಿಗಳ ಆಧಾರದ ಮೇಲೆ ಕೈಗೊಂಡಿರುವ ನಿರ್ಧಾರವನ್ನು ಮರುಪರಿಶೀಲಿಸಬೇಕು ಎಂದು ಆಗ್ರಹಿಸಿದರು.
ಗಾಣದಾಳ ಗ್ರಾಮ ಪಂಚಾಯಿತಿಯ ಸಾಮಾನ್ಯ ಸಭೆಯಲ್ಲಿ 2025ರ ಮಾರ್ಚ್ 24ರಂದು ನಾಲ್ಕು ಗ್ರಾಮಗಳನ್ನು ದೇವದುರ್ಗ ತಾಲೂಕಿಗೆ ಮರುಸೇರ್ಪಡೆಗೊಳಿಸುವಂತೆ ನಿರ್ಣಯ ಅಂಗೀಕರಿಸಲಾಗಿದೆ. ಇದೀಗ ಸಾರ್ವಜನಿಕರ ಜನಾಭಿಪ್ರಾಯವನ್ನೂ ಸಂಗ್ರಹಿಸಿ, ಸಹಿ ಪಡೆದು ಸಭೆಯ ನಡಾವಳಿ ಸಿದ್ಧಪಡಿಸಲಾಗಿದೆ ಎಂದು ತಿಳಿಸಲಾಯಿತು.
ಸಭೆಯಲ್ಲಿ ಅರಕೇರಾ ತಹಶೀಲ್ದಾರ್ ಗ್ರೇಡ್-2 ಶ್ರೀಧರ ಪವಾರ್, ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಗಂಗಮ್ಮ, ಕಾರ್ಯದರ್ಶಿ ಯಮನೂರಪ್ಪ, ಜಾಲಹಳ್ಳಿ ಪೊಲೀಸ್ ಠಾಣೆಯ ಪಿಎಸ್ಐ ವೈಶಾಲಿ, ವಕೀಲ ಬಸವರಾಜ ಗಾಣದಾಳ, ಸಾಬಣ್ಣ ಹೂಗಾರ್, ಸಾಬಣ್ಣ ಕಮಲದಿನ್ನಿ, ಮೌನೇಶ್ ಗಾಣದಾಳ, ಶಿವು ಪಾಟೀಲ್, ವೆಂಕಟರೆಡ್ಡಿ, ಶರಣಗೌಡ ಬೆನಕನ್, ಸುರೇಶ ಕಕ್ಕಲದೊಡ್ಡಿ, ಶಿವನಗೌಡ ದೇಸಾಯಿ, ಅಮರೇಗೌಡ ಕಮಲದಿನ್ನಿ, ಮಲ್ಲನಗೌಡ ದೇಸಾಯಿ, ಶಿವನಗೌಡ ಕಕ್ಕಲದೊಡ್ಡಿ, ಮಲ್ಲಿಕಾರ್ಜುನ ಬೆನಕನ್, ಚನ್ನಬಸವ ನಾಯಕ, ವಾಸುದೇವ ಮ್ಯಾಕಲ್ ದೊಡ್ಡಿ, ಅಯ್ಯನಗೌಡ ಮಾಸ್ತಿ, ನಿಂಗಯ್ಯ, ಚನ್ನಬಸವಗೌಡ, ಶರಣಗೌಡ, ಯಲ್ಲನಗೌಡ ದಳಪತಿ, ಎಂ.ಆರ್. ಬಸವ, ಅಮರೇಗೌಡ ಹೊಟ್ಟಿ, ಹನುಮಂತಪ್ಪ ಬಡಿಗೇರ್, ಸಲ್ಮಾನ್ ದೊಡ್ಮನಿ, ಶಾಂತಪ್ಪ ಮಾನಗೇರ ಸೇರಿದಂತೆ ನಾಲ್ಕು ಗ್ರಾಮಗಳ ಮುಖಂಡರು, ಮಹಿಳೆಯರು ಹಾಗೂ ಸಾರ್ವಜನಿಕರು ಉಪಸ್ಥಿತರಿದ್ದರು.
ಮರುಸೇರ್ಪಡೆ ಮಾಡದಿದ್ದರೆ ಚುನಾವಣೆ ಬಹಿಷ್ಕಾರ: ವಸಂತಕುಮಾರ್ ಎಚ್ಚರಿಕೆ
ಗಾಣದಾಳ ಗ್ರಾಮ ಪಂಚಾಯಿತಿ ವ್ಯಾಪ್ತಿಯ ನಾಲ್ಕು ಗ್ರಾಮಗಳನ್ನು ದೇವದುರ್ಗ ತಾಲೂಕಿಗೆ ಮರುಸೇರ್ಪಡೆಗೊಳಿಸುವುದು ಗ್ರಾಮಸ್ಥರ ಒಕ್ಕೊರಲಿನ ಬೇಡಿಕೆಯಾಗಿದೆ. ಜನಾಭಿಪ್ರಾಯ ಸಂಗ್ರಹ ಸಭೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಸಾರ್ವಜನಿಕರು ಭಾಗವಹಿಸಿ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಸರ್ಕಾರ ಹಾಗೂ ಸಂಬಂಧಪಟ್ಟ ಅಧಿಕಾರಿಗಳು ಗ್ರಾಮಸ್ಥರ ಬೇಡಿಕೆಗೆ ಮನ್ನಣೆ ನೀಡಿ ಶೀಘ್ರ ನಿರ್ಧಾರ ಕೈಗೊಳ್ಳಬೇಕು. ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ಚುನಾವಣೆ ಬಹಿಷ್ಕರಿಸುವ ಮೂಲಕ ಹೋರಾಟವನ್ನು ತೀವ್ರಗೊಳಿಸಲಾಗುವುದು ಎಂದು ಹೋರಾಟ ಸಮಿತಿ ಅಧ್ಯಕ್ಷ, ವಕೀಲ ವಸಂತಕುಮಾರ್ ಎಚ್ಚರಿಸಿದರು.
ಅರಕೇರಾಕ್ಕೆ ತೆರಳಲು ಮಹಿಳೆಯರು, ವೃದ್ಧರಿಗೆ ತೀವ್ರ ತೊಂದರೆ
ಅರಕೇರಾ ತಾಲೂಕು ಕೇಂದ್ರಕ್ಕೆ ತೆರಳಲು ಸಮರ್ಪಕ ಸಾರಿಗೆ ಸೌಲಭ್ಯವಿಲ್ಲದ ಕಾರಣ ಮಹಿಳೆಯರು ಹಾಗೂ ವೃದ್ಧರು ಸಾಕಷ್ಟು ತೊಂದರೆ ಅನುಭವಿಸುತ್ತಿದ್ದಾರೆ. ಸರ್ಕಾರಿ ಯೋಜನೆಗಳ ಸೌಲಭ್ಯ ಪಡೆಯಲು ಮತ್ತು ಕಂದಾಯ ದಾಖಲೆಗಳಿಗೆ ಸಂಬಂಧಿಸಿದ ಕೆಲಸಗಳಿಗಾಗಿ ದೂರದ ಪ್ರಯಾಣ ಮಾಡಬೇಕಾಗಿದೆ. ಇದರಿಂದ ಆರ್ಥಿಕ ಹೊರೆ ಹೆಚ್ಚಾಗುವುದರ ಜೊತೆಗೆ ಸಮಯವೂ ವ್ಯರ್ಥವಾಗುತ್ತಿದೆ. ಮಹಿಳೆಯರು ಹಾಗೂ ವೃದ್ಧರ ಸಮಸ್ಯೆಗಳನ್ನು ಗಮನದಲ್ಲಿಟ್ಟುಕೊಂಡು ಗಾಣದಾಳ ಸೇರಿದಂತೆ ನಾಲ್ಕು ಗ್ರಾಮಗಳನ್ನು ದೇವದುರ್ಗ ತಾಲೂಕಿಗೆ ಮರುಸೇರ್ಪಡೆಗೊಳಿಸಬೇಕು ಎಂದು ಪಾರ್ವತಿ ಸೇರಿದಂತೆ ಸಭೆಯಲ್ಲಿ ಭಾಗವಹಿಸಿದ್ದ ಮಹಿಳೆಯರು ಒತ್ತಾಯಿಸಿದರು.



