ರಾಯಚೂರು: ತಾಲೂಕಿನ ಚಂದ್ರಬಂಡಾ ಗ್ರಾಮದ ಪ್ರಸಿದ್ಧ ಧಾರ್ಮಿಕ ಕ್ಷೇತ್ರವಾದ ಶ್ರೀ ಬಂಡೆ ರಂಗನಾಥಸ್ವಾಮಿ ದೇವಸ್ಥಾನದಲ್ಲಿ ದೀಪಾವಳಿ ಹಬ್ಬದ ಅಂಗವಾಗಿ ನವೆಂಬರ್ 10ರಿಂದ 12ರವರೆಗೆ ಮೂರು ದಿನಗಳ ಕಾಲ ಜಾತ್ರಾ ಮಹೋತ್ಸವವನ್ನು ವಿಜೃಂಭಣೆಯಿಂದ ಆಚರಿಸಲು ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದೆ. ಜಾತ್ರೆಯ ವಿಶೇಷ ಆಕರ್ಷಣೆಯಾಗಿ ರಾಜ್ಯ ಹಾಗೂ ರಾಷ್ಟ್ರಮಟ್ಟದ ಎತ್ತುಗಳಿಂದ ಬಂಡೆ ಕಲ್ಲು ಎಳೆಯುವ ಸ್ಪರ್ಧೆಗಳನ್ನು ಏರ್ಪಡಿಸಲಾಗಿದೆ ಎಂದು ಬುದಯ್ಯ ಸ್ವಾಮಿ ತಿಳಿಸಿದರು.

ನಗರದಲ್ಲಿ ಆಯೋಜಿಸಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಚಂದ್ರಬಂಡಾ ಗ್ರಾಮದಲ್ಲಿ ಪ್ರತಿವರ್ಷ ದೀಪಾವಳಿ ಸಂದರ್ಭದಲ್ಲಿ ಶ್ರೀ ಬಂಡೆ ರಂಗನಾಥಸ್ವಾಮಿಯ ಜಾತ್ರೆಯನ್ನು ಸಾಂಪ್ರದಾಯಿಕವಾಗಿ ಆಚರಿಸಿಕೊಂಡು ಬರಲಾಗುತ್ತಿದೆ. ಈ ವರ್ಷವೂ ಧಾರ್ಮಿಕ ವಿಧಿವಿಧಾನಗಳೊಂದಿಗೆ ಜಾತ್ರೆ ನಡೆಸಲು ದೇವಸ್ಥಾನದ ಆಡಳಿತ ಮಂಡಳಿ ಹಾಗೂ ಗ್ರಾಮಸ್ಥರು ಸಿದ್ಧತೆ ಮಾಡಿಕೊಂಡಿದ್ದಾರೆ. ಮೂರು ದಿನಗಳ ಜಾತ್ರೆಯಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳ ಜತೆಗೆ ಎತ್ತುಗಳ ಶಕ್ತಿ ಮತ್ತು ಸಾಮರ್ಥ್ಯ ಪ್ರದರ್ಶಿಸುವ ವಿಶಿಷ್ಟ ಸ್ಪರ್ಧೆಗಳು ನಡೆಯಲಿವೆ ಎಂದು ವಿವರಿಸಿದರು.

ನವೆಂಬರ್ 10ರಂದು ಮಂಗಳವಾರ ಸಂಜೆ 4 ಗಂಟೆಗೆ ಶ್ರೀ ಬಂಡೆ ರಂಗನಾಥಸ್ವಾಮಿಯ ಉಚ್ಛಾಯ ಕಾರ್ಯಕ್ರಮ ನಡೆಯಲಿದ್ದು, ಇದರೊಂದಿಗೆ ಜಾತ್ರಾ ಮಹೋತ್ಸವಕ್ಕೆ ಚಾಲನೆ ದೊರೆಯಲಿದೆ. ಮರುದಿನ ನವೆಂಬರ್ 11ರಂದು ಬುಧವಾರ ಬೆಳಿಗ್ಗೆ 9 ಗಂಟೆಯಿಂದ ಕರ್ನಾಟಕ ರಾಜ್ಯದ ಜನರಲ್ ಕೆಟಗರಿ ವಿಭಾಗದ ಎತ್ತುಗಳಿಗೆ 11 ಕ್ವಿಂಟಾಲ್ ತೂಕದ ಬಂಡೆ ಕಲ್ಲು ಎಳೆಯುವ ಸ್ಪರ್ಧೆ ಆಯೋಜಿಸಲಾಗಿದೆ.

ಈ ಸ್ಪರ್ಧೆಯಲ್ಲಿ ಉತ್ತಮ ಪ್ರದರ್ಶನ ನೀಡುವ ಎತ್ತುಗಳ ಮಾಲೀಕರಿಗೆ ಪ್ರಥಮ ಬಹುಮಾನವಾಗಿ ₹30 ಸಾವಿರ, ದ್ವಿತೀಯ ₹20 ಸಾವಿರ, ತೃತೀಯ ₹10 ಸಾವಿರ, ನಾಲ್ಕನೇ ₹8 ಸಾವಿರ, ಐದನೇ ₹5 ಸಾವಿರ ಹಾಗೂ ಆರನೇ ಬಹುಮಾನವಾಗಿ ₹3 ಸಾವಿರ ನಗದು ಬಹುಮಾನ ನೀಡಲಾಗುವುದು ಎಂದು ತಿಳಿಸಿದರು.

ನವೆಂಬರ್ 12ರಂದು ಗುರುವಾರ ಬೆಳಿಗ್ಗೆ 9 ಗಂಟೆಗೆ ರಾಷ್ಟ್ರಮಟ್ಟದ ಒಂಗೋಲ್ ನ್ಯೂ ಕೆಟಗರಿ ವಿಭಾಗದ ಎತ್ತುಗಳಿಂದ 14 ಕ್ವಿಂಟಾಲ್ ತೂಕದ ಬಂಡೆ ಕಲ್ಲು ಎಳೆಯುವ ಸ್ಪರ್ಧೆ ನಡೆಯಲಿದೆ. ಈ ಸ್ಪರ್ಧೆಯಲ್ಲಿ ವಿವಿಧ ರಾಜ್ಯಗಳ ಎತ್ತುಗಳು ಭಾಗವಹಿಸಲು ಅವಕಾಶ ಕಲ್ಪಿಸಲಾಗಿದೆ. ವಿಜೇತರಿಗೆ ಪ್ರಥಮ ಬಹುಮಾನ ₹50 ಸಾವಿರ, ದ್ವಿತೀಯ ₹40 ಸಾವಿರ, ತೃತೀಯ ₹30 ಸಾವಿರ, ನಾಲ್ಕನೇ ₹20 ಸಾವಿರ, ಐದನೇ ₹10 ಸಾವಿರ, ಆರನೇ ₹8 ಸಾವಿರ, ಏಳನೇ ₹6 ಸಾವಿರ ಹಾಗೂ ಎಂಟನೇ ಬಹುಮಾನವಾಗಿ ₹5 ಸಾವಿರ ನಗದು ನೀಡಲಾಗುವುದು ಎಂದು ಮಾಹಿತಿ ನೀಡಿದರು.

ಗ್ರಾಮೀಣ ಭಾಗದ ಸಾಂಪ್ರದಾಯಿಕ ಕ್ರೀಡೆಗಳಲ್ಲಿ ಒಂದಾದ ಎತ್ತುಗಳಿಂದ ಬಂಡೆ ಕಲ್ಲು ಎಳೆಯುವ ಸ್ಪರ್ಧೆಯು ಚಂದ್ರಬಂಡಾ ಜಾತ್ರೆಯ ಪ್ರಮುಖ ಆಕರ್ಷಣೆಯಾಗಿದೆ. ಈ ಸ್ಪರ್ಧೆಗಳನ್ನು ವೀಕ್ಷಿಸಲು ಸುತ್ತಮುತ್ತಲಿನ ಗ್ರಾಮಗಳು ಹಾಗೂ ವಿವಿಧ ಜಿಲ್ಲೆಗಳಿಂದ ರೈತರು, ಪಶುಪಾಲಕರು ಮತ್ತು ಸಾರ್ವಜನಿಕರು ಆಗಮಿಸುವ ನಿರೀಕ್ಷೆಯಿದೆ. ಎರಡೂ ವಿಭಾಗಗಳ ಸ್ಪರ್ಧೆಗಳಿಗೆ ಚಂದ್ರಬಂಡಾ ಗ್ರಾಮದ ದಾನಿಗಳು ಬಹುಮಾನಗಳ ಪ್ರಾಯೋಜಕತ್ವ ವಹಿಸಿಕೊಂಡಿದ್ದಾರೆ ಎಂದು ಹೇಳಿದರು.

ಜಾತ್ರಾ ಮಹೋತ್ಸವಕ್ಕೆ ಆಗಮಿಸುವ ಭಕ್ತರು, ಸ್ಪರ್ಧಾಳುಗಳು ಹಾಗೂ ಸಾರ್ವಜನಿಕರ ಅನುಕೂಲಕ್ಕಾಗಿ ನವೆಂಬರ್ 11 ಮತ್ತು 12ರಂದು ಅನ್ನದಾಸೋಹ ಮತ್ತು ಶುದ್ಧ ಕುಡಿಯುವ ನೀರಿನ ವ್ಯವಸ್ಥೆ ಮಾಡಲಾಗಿದೆ. ಜಾತ್ರೆಯನ್ನು ಶಾಂತಿಯುತವಾಗಿ ಹಾಗೂ ಯಶಸ್ವಿಯಾಗಿ ನೆರವೇರಿಸಲು ಗ್ರಾಮಸ್ಥರು ಮತ್ತು ದೇವಸ್ಥಾನದ ಭಕ್ತರು ಸಹಕಾರ ನೀಡುತ್ತಿದ್ದಾರೆ ಎಂದರು.

ಶ್ರೀ ಬಂಡೆ ರಂಗನಾಥಸ್ವಾಮಿಯ ಜಾತ್ರಾ ಮಹೋತ್ಸವದಲ್ಲಿ ರಾಯಚೂರು ಜಿಲ್ಲೆ ಸೇರಿದಂತೆ ವಿವಿಧ ಭಾಗಗಳ ಭಕ್ತರು, ರೈತರು ಹಾಗೂ ಎತ್ತುಗಳ ಸ್ಪರ್ಧೆಯ ಅಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಕಾರ್ಯಕ್ರಮದ ಯಶಸ್ಸಿಗೆ ಕೈಜೋಡಿಸಬೇಕು ಎಂದು ಬುದಯ್ಯ ಸ್ವಾಮಿ ಮನವಿ ಮಾಡಿದರು.

ಜಾತ್ರೆ ಹಾಗೂ ಎತ್ತುಗಳ ಸ್ಪರ್ಧೆಗಳ ಕುರಿತು ಹೆಚ್ಚಿನ ಮಾಹಿತಿಗಾಗಿ ಮೊಬೈಲ್ ಸಂಖ್ಯೆ 8660975515 ಅಥವಾ 9740346454 ಸಂಪರ್ಕಿಸಬಹುದು ಎಂದು ತಿಳಿಸಿದರು.

ಪತ್ರಿಕಾಗೋಷ್ಠಿಯಲ್ಲಿ ರಾಜಯ್ಯ ಶೆಟ್ಟಿ ಹಾಗೂ ನರಸಿಂಗರಾವ್ ಕುಲಕರ್ಣಿ ಉಪಸ್ಥಿತರಿದ್ದರು.