ರಾಯಚೂರು: ವಿಶ್ವವಿದ್ಯಾಲಯ ಧನಸಹಾಯ ಆಯೋಗದ ರಾಷ್ಟ್ರೀಯ ಅರ್ಹತಾ ಪರೀಕ್ಷೆ (ಯುಜಿಸಿ ನೆಟ್)ಗೆ ಸಿದ್ಧತೆ ನಡೆಸುತ್ತಿರುವ ಸ್ನಾತಕೋತ್ತರ ಪದವೀಧರರು ಹಾಗೂ ಸಂಶೋಧನಾ ಕ್ಷೇತ್ರದಲ್ಲಿ ಮುಂದುವರಿಯಲು ಆಸಕ್ತಿ ಹೊಂದಿರುವ ಅಭ್ಯರ್ಥಿಗಳಿಗೆ ಮಾರ್ಗದರ್ಶನ ನೀಡುವ ಉದ್ದೇಶದಿಂದ ಅಶ್ವಮೇಧ ಫೌಂಡೇಶನ್ ವತಿಯಿಂದ ನವೆಂಬರ್ 14 ಮತ್ತು 15ರಂದು ಎರಡು ದಿನಗಳ ವಿಶೇಷ ತರಬೇತಿ ಕಾರ್ಯಾಗಾರ ಆಯೋಜಿಸಲಾಗಿದೆ ಎಂದು ಫೌಂಡೇಶನ್ ಅಧ್ಯಕ್ಷ ರಮೇಶ ಉಪ್ರಾಳ್ ತಿಳಿಸಿದರು.
ನಗರದ ಪತ್ರಿಕಾ ಭವನದಲ್ಲಿ ಭಾನುವಾರ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ನಗರದ ಸರ್ಕಾರಿ ನೌಕರರ ಭವನದಲ್ಲಿ ಕಾರ್ಯಾಗಾರ ನಡೆಯಲಿದ್ದು, ಯುಜಿಸಿ ನೆಟ್ ಪರೀಕ್ಷೆಗೆ ಪರಿಣಾಮಕಾರಿಯಾಗಿ ಸಿದ್ಧತೆ ನಡೆಸಲು ಅಗತ್ಯವಿರುವ ವಿಷಯಾಧಾರಿತ ಮಾರ್ಗದರ್ಶನ ನೀಡಲಾಗುವುದು ಎಂದು ಹೇಳಿದರು.
ಕಾರ್ಯಾಗಾರದಲ್ಲಿ ಗೌರಿಬಿದನೂರಿನ ಕೇಂದ್ರೀಯ ವಿದ್ಯಾಲಯದ ಗ್ರಂಥಪಾಲಕ ಹಾಗೂ ಅನುಭವಿ ಸಂಪನ್ಮೂಲ ವ್ಯಕ್ತಿ ಹನುಮಂತ ನಾಯಕ ಅವರು ತರಬೇತಿ ನೀಡಲಿದ್ದಾರೆ. ಮುಖ್ಯವಾಗಿ ಸಾಮಾನ್ಯ ಅಧ್ಯಯನ ವಿಷಯಕ್ಕೆ ಸಂಬಂಧಿಸಿದಂತೆ ಅಭ್ಯರ್ಥಿಗಳಿಗೆ ಉಪಯುಕ್ತ ಮಾಹಿತಿ ಹಾಗೂ ಪರೀಕ್ಷಾ ಸಿದ್ಧತೆಗೆ ಅಗತ್ಯವಾದ ಮಾರ್ಗದರ್ಶನ ಒದಗಿಸಲಿದ್ದಾರೆ ಎಂದು ವಿವರಿಸಿದರು.
ಸ್ನಾತಕೋತ್ತರ ಪದವಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳು, ಈಗಾಗಲೇ ಸ್ನಾತಕೋತ್ತರ ಪದವಿ ಪೂರ್ಣಗೊಳಿಸಿದ ಅಭ್ಯರ್ಥಿಗಳು, ಯುಜಿಸಿ ನೆಟ್ ಪರೀಕ್ಷೆಗೆ ತಯಾರಿ ನಡೆಸುತ್ತಿರುವವರು ಹಾಗೂ ಪಿಎಚ್ಡಿ ಪ್ರವೇಶ ಮತ್ತು ಕಿರಿಯ ಸಂಶೋಧನಾ ಶಿಷ್ಯವೇತನ (ಜೆಆರ್ಎಫ್) ಪಡೆಯುವ ಗುರಿ ಹೊಂದಿರುವವರು ಈ ಕಾರ್ಯಾಗಾರದ ಪ್ರಯೋಜನ ಪಡೆದುಕೊಳ್ಳಬಹುದು ಎಂದು ತಿಳಿಸಿದರು.
ಉನ್ನತ ಶಿಕ್ಷಣ ಹಾಗೂ ಸಂಶೋಧನಾ ಕ್ಷೇತ್ರದಲ್ಲಿ ವೃತ್ತಿಜೀವನ ರೂಪಿಸಿಕೊಳ್ಳಲು ಬಯಸುವ ಅಭ್ಯರ್ಥಿಗಳಿಗೆ ಇಂತಹ ತರಬೇತಿ ಕಾರ್ಯಕ್ರಮಗಳು ನೆರವಾಗಲಿವೆ. ರಾಯಚೂರು ಹಾಗೂ ಸುತ್ತಮುತ್ತಲಿನ ಪ್ರದೇಶಗಳ ಆಸಕ್ತ ವಿದ್ಯಾರ್ಥಿಗಳು ಮತ್ತು ಅಭ್ಯರ್ಥಿಗಳು ಕಾರ್ಯಾಗಾರದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಸದುಪಯೋಗ ಪಡೆದುಕೊಳ್ಳಬೇಕು ಎಂದು ರಮೇಶ ಉಪ್ರಾಳ್ ಮನವಿ ಮಾಡಿದರು.
ಸುದ್ದಿಗೋಷ್ಠಿಯಲ್ಲಿ ಅಶ್ವಮೇಧ ಫೌಂಡೇಶನ್ ಪದಾಧಿಕಾರಿಗಳಾದ ಅಂಜಿಬಾಬು, ಅನಂತರೆಡ್ಡಿ, ಜಾನ್ಸನ್, ಉರುಕುಂದ ಹಾಗೂ ಟೀಕಪ್ಪ ಉಪಸ್ಥಿತರಿದ್ದರು.



