ಮಾನ್ವಿ, ನ.10: ಬ್ರಿಟಿಷರ ವಿರುದ್ಧ ಕೆಚ್ಚೆದೆಯಿಂದ ಹೋರಾಡಿದ ಮೈಸೂರಿನ ಹುಲಿ ಟಿಪ್ಪು ಸುಲ್ತಾನ್ ಅವರು ಧೈರ್ಯ, ಸಾಹಸ ಹಾಗೂ ದೇಶಪ್ರೇಮದ ಪ್ರತೀಕವಾಗಿದ್ದು, ಅವರ ಹೋರಾಟದ ಇತಿಹಾಸ ಮತ್ತು ಆದರ್ಶಗಳನ್ನು ಮುಂದಿನ ಪೀಳಿಗೆಗೆ ಪರಿಚಯಿಸುವುದು ಪ್ರತಿಯೊಬ್ಬರ ಜವಾಬ್ದಾರಿಯಾಗಿದೆ ಎಂದು ಹಜರತ್ ಟಿಪ್ಪು ಸುಲ್ತಾನ್ ಸಂಘದ ಪದಾಧಿಕಾರಿ ಮೊಹಮ್ಮದ್ ಮುಸ್ತಫಾ ಅರೋಲಿ ಹೇಳಿದರು.

ತಾಲೂಕಿನ ಅರೋಲಿ ಗ್ರಾಮದಲ್ಲಿ ಮಂಗಳವಾರ ಹಜರತ್ ಟಿಪ್ಪು ಸುಲ್ತಾನ್ ಅವರ 277ನೇ ಜಯಂತಿ ಅಂಗವಾಗಿ ಆಯೋಜಿಸಿದ್ದ ಸರಳ ಕಾರ್ಯಕ್ರಮದಲ್ಲಿ ಟಿಪ್ಪು ಸುಲ್ತಾನ್ ಅವರ ಭಾವಚಿತ್ರಕ್ಕೆ ಪುಷ್ಪಮಾಲೆ ಅರ್ಪಿಸಿ ಗೌರವ ಸಲ್ಲಿಸಿದ ಬಳಿಕ ಅವರು ಮಾತನಾಡಿದರು.

ಟಿಪ್ಪು ಸುಲ್ತಾನ್ ಅವರು ಕೇವಲ ಒಬ್ಬ ರಾಜನಾಗಿ ಮಾತ್ರವಲ್ಲದೆ, ಬ್ರಿಟಿಷರ ಆಳ್ವಿಕೆ ವಿರುದ್ಧ ಹೋರಾಡಿದ ಧೈರ್ಯಶಾಲಿ ಯೋಧರಾಗಿ ಇತಿಹಾಸದಲ್ಲಿ ಗುರುತಿಸಿಕೊಂಡಿದ್ದಾರೆ. ಸ್ವಾಭಿಮಾನ, ಶೌರ್ಯ ಮತ್ತು ದೇಶಪ್ರೇಮದ ಮೂಲಕ ತಮ್ಮದೇ ಆದ ಛಾಪು ಮೂಡಿಸಿರುವ ಅವರ ಜೀವನ ಹಾಗೂ ಹೋರಾಟದ ಕುರಿತು ಯುವಜನರಲ್ಲಿ ಅರಿವು ಮೂಡಿಸುವ ಅಗತ್ಯವಿದೆ ಎಂದು ತಿಳಿಸಿದರು.

ದೇಶದ ಸ್ವಾತಂತ್ರ್ಯಕ್ಕಾಗಿ ಹೋರಾಡಿದ ಮಹನೀಯರ ತ್ಯಾಗ, ಬಲಿದಾನ ಮತ್ತು ಹೋರಾಟದ ಇತಿಹಾಸವನ್ನು ಸ್ಮರಿಸುವುದರೊಂದಿಗೆ ಅವರ ಆದರ್ಶಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ಇಂತಹ ಜಯಂತಿ ಕಾರ್ಯಕ್ರಮಗಳು ಮಹನೀಯರ ಸಾಧನೆಗಳನ್ನು ಸ್ಮರಿಸಲು ಹಾಗೂ ಸಮಾಜದಲ್ಲಿ ಸೌಹಾರ್ದತೆ, ಸಹಬಾಳ್ವೆ ಮತ್ತು ಒಗ್ಗಟ್ಟಿನ ಸಂದೇಶ ಸಾರಲು ಸಹಕಾರಿಯಾಗುತ್ತವೆ ಎಂದು ಅಭಿಪ್ರಾಯಪಟ್ಟರು.

ಕಾರ್ಯಕ್ರಮದಲ್ಲಿ ಟಿಪ್ಪು ಸುಲ್ತಾನ್ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸಿ ಗೌರವ ನಮನ ಸಲ್ಲಿಸಲಾಯಿತು.

ಈ ಸಂದರ್ಭದಲ್ಲಿ ಶಬೀರ್, ಜಾಫರ್ ಸಾದಿಕ್, ರಫಿ, ಹುಸೇನ್ ಭಾಷಾ, ಪೊಲೀಸ್ ಭಾಷಾ, ನೂರುದ್ದೀನ್, ಸದ್ದಾಂ, ಒಡೆಯ ರಾಜ್, ನಬಿಚಾಂದ್, ಇಸ್ಮಾಯಿಲ್, ಟೆಂಟ್ ಬಾಬು ಸೇರಿದಂತೆ ಗ್ರಾಮದ ಅನೇಕರು ಉಪಸ್ಥಿತರಿದ್ದರು.