ಲಿಂಗಸುಗೂರು, ನ.11: ಲಿಂಗಸುಗೂರು ಪೊಲೀಸ್ ಠಾಣೆ ವ್ಯಾಪ್ತಿಯ ಸುಣಕಲ್ ಗ್ರಾಮದಲ್ಲಿ ನಡೆದ ಜಾತಿ ನಿಂದನೆ, ಹಲ್ಲೆ ಹಾಗೂ ಜೀವ ಬೆದರಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ಆರೋಪಿಗಳ ಅಪರಾಧ ಸಾಬೀತಾದ ಹಿನ್ನೆಲೆಯಲ್ಲಿ ನ್ಯಾಯಾಲಯವು ಆರು ತಿಂಗಳ ಕಾರಾಗೃಹ ಶಿಕ್ಷೆ ಹಾಗೂ ತಲಾ ₹3 ಸಾವಿರ ದಂಡ ವಿಧಿಸಿ ತೀರ್ಪು ನೀಡಿದೆ.

ಪ್ರಕರಣದ ವಿವರ: ಲಿಂಗಸುಗೂರು ತಾಲೂಕಿನ ಸುಣಕಲ್ ಗ್ರಾಮದ ನಿವಾಸಿ ಯಲ್ಲಮ್ಮ ಅಲಿಯಾಸ್ ಯಲ್ಲವ್ವ ಅವರ ಮಕ್ಕಳು ಮೊಬೈಲ್‌ನಲ್ಲಿ ಹಾಡು ಹಾಕಿಕೊಂಡಿದ್ದ ವಿಚಾರವಾಗಿ ಮಾಳಿಂಗರಾಯ ಎಂಬಾತನೊಂದಿಗೆ ಮಾತಿನ ಚಕಮಕಿ ನಡೆದಿತ್ತು. ಮೊಬೈಲ್‌ನಲ್ಲಿ ಹಾಡು ಹಾಕದಂತೆ ಆಕ್ಷೇಪ ವ್ಯಕ್ತಪಡಿಸಿದ ಹಿನ್ನೆಲೆಯಲ್ಲಿ ಉಂಟಾದ ವಾಗ್ವಾದವು ಜಗಳಕ್ಕೆ ಕಾರಣವಾಗಿತ್ತು ಎನ್ನಲಾಗಿದೆ.

ಈ ಘಟನೆಯಿಂದ ಉಂಟಾದ ವಿವಾದದ ಹಿನ್ನೆಲೆಯಲ್ಲಿ ಆರೋಪಿಗಳು ಒಟ್ಟಾಗಿ ಯಲ್ಲಮ್ಮ ಅವರ ಮನೆಗೆ ತೆರಳಿ ಜಗಳ ತೆಗೆದು, ಹಲ್ಲೆ ನಡೆಸಿ, ಜಾತಿ ನಿಂದನೆ ಮಾಡುವುದರ ಜೊತೆಗೆ ಜೀವ ಬೆದರಿಕೆ ಹಾಕಿದ್ದಾರೆ ಎಂದು ಯಲ್ಲಮ್ಮ ಪೊಲೀಸ್ ಠಾಣೆಗೆ ದೂರು ನೀಡಿದ್ದರು.

ದೂರಿನ ಆಧಾರದಲ್ಲಿ ಲಿಂಗಸುಗೂರು ಪೊಲೀಸ್ ಠಾಣೆಯಲ್ಲಿ 2021ರಲ್ಲಿ ಅಪರಾಧ ಸಂಖ್ಯೆ 08/2021ರ ಅಡಿಯಲ್ಲಿ ಭಾರತೀಯ ದಂಡ ಸಂಹಿತೆಯ ಕಲಂ 143, 147, 148, 323, 324, 504, 506 ಹಾಗೂ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಮೇಲಿನ ದೌರ್ಜನ್ಯ ತಡೆ ಕಾಯ್ದೆಯ ತಿದ್ದುಪಡಿ-2015ರ ಕಲಂ 3(1)(r), 3(1)(s) ಮತ್ತು 3(2)(va) ಅನ್ವಯ ಪ್ರಕರಣ ದಾಖಲಿಸಲಾಗಿತ್ತು.

ಪ್ರಕರಣದ ತನಿಖೆಯನ್ನು ಅಂದಿನ ಲಿಂಗಸುಗೂರು ಪೊಲೀಸ್ ಉಪಾಧೀಕ್ಷಕ ಎಸ್.ಎಸ್. ಹುಲ್ಲೂರು ಅವರು ಕೈಗೊಂಡು, ಆರೋಪಿಗಳ ವಿರುದ್ಧ ನ್ಯಾಯಾಲಯಕ್ಕೆ ದೋಷಾರೋಪಣ ಪಟ್ಟಿ ಸಲ್ಲಿಸಿದ್ದರು.

ಪ್ರಕರಣದ ವಿಚಾರಣೆ ನಡೆಸಿದ ರಾಯಚೂರಿನ ಮೂರನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ಸಿಂಧನೂರು ಪೀಠದ ನ್ಯಾಯಾಧೀಶ ಎ. ಸೋಮಶೇಖರ್ ಅವರು ಸಾಕ್ಷ್ಯಾಧಾರಗಳು ಹಾಗೂ ವಾದ-ಪ್ರತಿವಾದಗಳನ್ನು ಪರಿಶೀಲಿಸಿದರು.

ನವೆಂಬರ್ 7ರಂದು ನೀಡಿದ ತೀರ್ಪಿನಲ್ಲಿ ಆರೋಪಿಗಳಾದ ಯಲ್ಲಪ್ಪ ಮತ್ತು ಬಸಪ್ಪ ಅವರು ಅಪರಾಧ ಎಸಗಿರುವುದು ಸಾಬೀತಾಗಿದೆ ಎಂದು ಪರಿಗಣಿಸಿದ ನ್ಯಾಯಾಲಯ, ಇಬ್ಬರಿಗೂ ಆರು ತಿಂಗಳ ಕಾರಾಗೃಹ ಶಿಕ್ಷೆ ಹಾಗೂ ತಲಾ ₹3 ಸಾವಿರ ದಂಡ ವಿಧಿಸಿದೆ.

ಪ್ರಕರಣದಲ್ಲಿ ಸರ್ಕಾರದ ಪರವಾಗಿ ಸರ್ಕಾರಿ ಅಭಿಯೋಜಕ ಮಂಜುನಾಥ ಬೇರ್ಗಿ ವಾದ ಮಂಡಿಸಿದರು.

ಲಿಂಗಸುಗೂರು ಪೊಲೀಸ್ ಠಾಣೆಯ ಸಿಬ್ಬಂದಿಗಳಾದ ನಿಂಗಯ್ಯ (ಪಿಸಿ ಸಂಖ್ಯೆ 110) ಹಾಗೂ ಮಂಜುನಾಥ (ಸಿಪಿಸಿ ಸಂಖ್ಯೆ 118) ಅವರು ಸಾಕ್ಷಿದಾರರನ್ನು ನಿಗದಿತ ಸಮಯದಲ್ಲಿ ನ್ಯಾಯಾಲಯಕ್ಕೆ ಹಾಜರುಪಡಿಸುವ ಕಾರ್ಯದಲ್ಲಿ ಸಹಕರಿಸಿದ್ದರು.