ಮಾನ್ವಿ: ರಾಯಚೂರು ಜಿಲ್ಲೆಯ ಕನ್ನಡ ಸೇರಿದಂತೆ ವಿವಿಧ ಭಾಷೆಗಳಲ್ಲಿ ಸಾಹಿತ್ಯ ಕೃಷಿ ಮಾಡಿರುವ ಸಾಹಿತಿಗಳು, ಲೇಖಕರು, ಕವಿಗಳು, ವಿಮರ್ಶಕರು ಹಾಗೂ ಚಿಂತಕರ ಸಮಗ್ರ ಮಾಹಿತಿಯನ್ನು ಒಳಗೊಂಡ ಪರಿಚಯ ಪುಸ್ತಕವನ್ನು ಹೊರತರಲು ಉದ್ದೇಶಿಸಲಾಗಿದ್ದು, ಸಂಬಂಧಪಟ್ಟವರಿಂದ ಮಾಹಿತಿ ಆಹ್ವಾನಿಸಲಾಗಿದೆ ಎಂದು ಪಟ್ಟಣದ ನೇತಾಜಿ ಪ್ರಕಾಶನದ ಮುಖ್ಯಸ್ಥೆ ಕೆ. ವಿಜಯಲಕ್ಷ್ಮೀ ತಿಳಿಸಿದ್ದಾರೆ.
ನೇತಾಜಿ ಪ್ರಕಾಶನದ ವತಿಯಿಂದ ಹೊಸಗನ್ನಡ ಸಾಹಿತ್ಯದ ಅರುಣೋದಯ ಕಾಲದಿಂದ ಜಾಗತೀಕರಣದ ಇಂದಿನ ಯುಗದವರೆಗೆ ವಿವಿಧ ಸಾಹಿತ್ಯ ಪ್ರಕಾರಗಳಲ್ಲಿ ಕೃಷಿ ಮಾಡಿರುವ ರಾಯಚೂರು ಜಿಲ್ಲೆಯ ಸಾಹಿತಿಗಳು, ಬರಹಗಾರರು ಹಾಗೂ ಅವರ ಸಾಹಿತ್ಯ ಕೃತಿಗಳ ಕುರಿತು ಸಮಗ್ರ ಮಾಹಿತಿ ಸಂಗ್ರಹಿಸಿ ಪರಿಚಯ ಪುಸ್ತಕ ಪ್ರಕಟಿಸಲು ಯೋಜಿಸಲಾಗಿದೆ ಎಂದು ತಿಳಿಸಿದ್ದಾರೆ.
ಜಿಲ್ಲೆಯಲ್ಲಿ ಜನಿಸಿ ಪ್ರಸ್ತುತ ಜಿಲ್ಲೆಯ ಹೊರಗೆ ನೆಲೆಸಿರುವ ಸಾಹಿತಿಗಳು, ಲೇಖಕರು, ಕವಿಗಳು, ವಿಮರ್ಶಕರು, ಚಿಂತಕರು ಹಾಗೂ ಸಾಹಿತ್ಯ ಕ್ಷೇತ್ರದಲ್ಲಿ ತೊಡಗಿಸಿಕೊಂಡಿರುವ ಸಮಾಜಸೇವಕರ ಮಾಹಿತಿಯನ್ನೂ ಪುಸ್ತಕದಲ್ಲಿ ದಾಖಲಿಸಲು ಉದ್ದೇಶಿಸಲಾಗಿದೆ. ಕನಿಷ್ಠ ಒಂದು ಪುಸ್ತಕವನ್ನಾದರೂ ಪ್ರಕಟಿಸಿರುವ ಲೇಖಕರು ತಮ್ಮ ವೈಯಕ್ತಿಕ ಪರಿಚಯ, ಸಾಹಿತ್ಯ ಸಾಧನೆ ಹಾಗೂ ಪ್ರಕಟಿತ ಕೃತಿಗಳ ಸಂಪೂರ್ಣ ವಿವರಗಳನ್ನು ಕಳುಹಿಸಿಕೊಡಬಹುದು ಎಂದು ತಿಳಿಸಿದ್ದಾರೆ.
ಅಲ್ಲದೆ, ಸಾಹಿತಿಗಳ ಕುಟುಂಬದ ಸದಸ್ಯರು, ಆಪ್ತರು ಹಾಗೂ ಸಾಹಿತ್ಯಾಸಕ್ತರು ತಮ್ಮ ಪರಿಚಯದಲ್ಲಿರುವ ಲೇಖಕರು ಮತ್ತು ಸಾಹಿತಿಗಳ ಕುರಿತು ಮಾಹಿತಿ ಹೊಂದಿದ್ದರೆ ಅದನ್ನೂ ಪ್ರಕಾಶನಕ್ಕೆ ಕಳುಹಿಸಬಹುದು. ಜಿಲ್ಲೆಯ ಸಾಹಿತ್ಯ ಪರಂಪರೆ, ವಿವಿಧ ಭಾಷೆಗಳ ಸಾಹಿತ್ಯಿಕ ಕೊಡುಗೆ ಹಾಗೂ ಸಾಹಿತಿಗಳ ಸಾಧನೆಗಳನ್ನು ಒಂದೇ ಪುಸ್ತಕದಲ್ಲಿ ದಾಖಲಿಸುವುದು ಈ ಪ್ರಯತ್ನದ ಉದ್ದೇಶವಾಗಿದೆ ಎಂದು ವಿವರಿಸಿದ್ದಾರೆ.
ಆಸಕ್ತರು ತಮ್ಮ ವೈಯಕ್ತಿಕ ಪರಿಚಯ ಹಾಗೂ ಪ್ರಕಟಿತ ಸಾಹಿತ್ಯ ಕೃತಿಗಳ ಸಂಪೂರ್ಣ ಮಾಹಿತಿಯನ್ನು ನೇತಾಜಿ ಪ್ರಕಾಶನ, ಕೆ.ಜಿ. ರಸ್ತೆ, ನೇತಾಜಿ ನಗರ, ಮಾನ್ವಿ–584123 ವಿಳಾಸಕ್ಕೆ ಕಳುಹಿಸಿಕೊಡಬೇಕು. ಹೆಚ್ಚಿನ ಮಾಹಿತಿಗಾಗಿ ಮೊಬೈಲ್ ಸಂಖ್ಯೆ 9880706628 ಸಂಪರ್ಕಿಸಬಹುದು ಎಂದು ಕೆ. ವಿಜಯಲಕ್ಷ್ಮೀ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.



