ರಾಯಚೂರು, ನ.10: ನಗರದ ಹಿರಿಯ ನ್ಯಾಯವಾದಿ ಹಾಗೂ ಜಿಲ್ಲಾ ಕಾಂಗ್ರೆಸ್ ಸಮಿತಿಯ ಉಪಾಧ್ಯಕ್ಷ ಸೈಯದ್ ಜಾವೀದ್ ಉಲ್ ಹಕ್ ಅವರು ಅನಾರೋಗ್ಯದ ಹಿನ್ನೆಲೆಯಲ್ಲಿ ಮಂಗಳವಾರ ಮಧ್ಯಾಹ್ನ 12.15ಕ್ಕೆ ನಿಧನರಾದರು.
ಕಳೆದ ಕೆಲವು ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಅವರು ಚಿಕಿತ್ಸೆ ಪಡೆಯುತ್ತಿದ್ದರು ಎಂದು ತಿಳಿದುಬಂದಿದೆ. ಅವರ ನಿಧನದಿಂದ ಜಿಲ್ಲೆಯ ವಕೀಲರ ಸಮುದಾಯ ಹಾಗೂ ಕಾಂಗ್ರೆಸ್ ವಲಯದಲ್ಲಿ ಶೋಕದ ಛಾಯೆ ಆವರಿಸಿದೆ.
ಸುಮಾರು 35 ವರ್ಷಗಳ ಕಾಲ ವಕೀಲ ವೃತ್ತಿಯಲ್ಲಿ ಸೇವೆ ಸಲ್ಲಿಸಿದ್ದ ಸೈಯದ್ ಜಾವೀದ್ ಉಲ್ ಹಕ್ ಅವರು ರಾಯಚೂರು ಜಿಲ್ಲೆಯ ನ್ಯಾಯಾಂಗ ಹಾಗೂ ಕಾನೂನು ಕ್ಷೇತ್ರದಲ್ಲಿ ಗುರುತಿಸಿಕೊಂಡಿದ್ದರು. ತಮ್ಮ ಸುದೀರ್ಘ ವೃತ್ತಿಜೀವನದಲ್ಲಿ ವಿವಿಧ ಜವಾಬ್ದಾರಿಗಳನ್ನು ನಿರ್ವಹಿಸುವ ಮೂಲಕ ಕಾನೂನು ಸೇವೆಯಲ್ಲಿ ತೊಡಗಿಸಿಕೊಂಡಿದ್ದರು.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಹಿಂದಿನ ಆಡಳಿತಾವಧಿಯಲ್ಲಿ ರಾಯಚೂರು ಜಿಲ್ಲಾ ಸರ್ಕಾರಿ ವಕೀಲರಾಗಿ ಕಾರ್ಯನಿರ್ವಹಿಸಿದ್ದ ಅವರು, ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿಯ (ಕೆಐಎಡಿಬಿ) ಕಾನೂನು ಸಲಹೆಗಾರರಾಗಿಯೂ ಸೇವೆ ಸಲ್ಲಿಸಿದ್ದರು.
ಕಾನೂನು ವೃತ್ತಿಯ ಜೊತೆಗೆ ರಾಜಕೀಯ ಹಾಗೂ ಸಾರ್ವಜನಿಕ ಕ್ಷೇತ್ರದಲ್ಲಿಯೂ ಸಕ್ರಿಯರಾಗಿದ್ದ ಅವರು, ರಾಯಚೂರು ಜಿಲ್ಲಾ ಕಾಂಗ್ರೆಸ್ ಸಮಿತಿಯ ಉಪಾಧ್ಯಕ್ಷರಾಗಿ ಮತ್ತು ಪಕ್ಷದ ಕಾನೂನು ಸಲಹೆಗಾರರಾಗಿ ಜವಾಬ್ದಾರಿ ನಿರ್ವಹಿಸುತ್ತಿದ್ದರು. ಕಾನೂನು ಕ್ಷೇತ್ರದಲ್ಲಿ ಹೊಂದಿದ್ದ ಅನುಭವದ ಮೂಲಕ ಪಕ್ಷದ ವಿವಿಧ ಕಾನೂನು ಸಂಬಂಧಿತ ವಿಚಾರಗಳಲ್ಲಿ ಸಲಹೆ ಮತ್ತು ಮಾರ್ಗದರ್ಶನ ನೀಡುತ್ತಿದ್ದರು.
ಮೃತರು ತಾಯಿ, ಪತ್ನಿ, ಒಬ್ಬ ಪುತ್ರ, ಇಬ್ಬರು ಪುತ್ರಿಯರು, ಸಹೋದರರು ಹಾಗೂ ಅಪಾರ ಬಂಧುಬಳಗವನ್ನು ಅಗಲಿದ್ದಾರೆ.
ಅವರ ಅಂತಿಮ ದರ್ಶನ ಹಾಗೂ ಅಂತ್ಯಕ್ರಿಯೆಗೆ ಸಂಬಂಧಿಸಿದಂತೆ ಕುಟುಂಬದ ಮೂಲಗಳು ಮಾಹಿತಿ ನೀಡಿದ್ದು, ಮಂಗಳವಾರ ರಾತ್ರಿ 8 ಗಂಟೆಗೆ ನಗರದ ಜಾಮಿಯಾ ಮಸೀದಿಯಲ್ಲಿ ಜನಾಜಾ ನಮಾಜ್ ನೆರವೇರಿಸಲಾಗುವುದು. ಬಳಿಕ ನಗರದ ಶಕ್ಕರ್ ಬೌಲಿ ಖಬರಸ್ಥಾನದಲ್ಲಿ ಮುಸ್ಲಿಂ ಧಾರ್ಮಿಕ ವಿಧಿವಿಧಾನಗಳ ಪ್ರಕಾರ ಅಂತ್ಯಕ್ರಿಯೆ ನಡೆಸಲಾಗುವುದು ಎಂದು ತಿಳಿಸಿವೆ.
ಸೈಯದ್ ಜಾವೀದ್ ಉಲ್ ಹಕ್ ಅವರ ನಿಧನದಿಂದ ರಾಯಚೂರು ಜಿಲ್ಲೆಯ ಕಾನೂನು ಹಾಗೂ ರಾಜಕೀಯ ಕ್ಷೇತ್ರದ ಅನುಭವಿ ವ್ಯಕ್ತಿಯೊಬ್ಬರನ್ನು ಕಳೆದುಕೊಂಡಂತಾಗಿದೆ.



