ಮಾನ್ವಿ: ಬ್ರಿಟಿಷರ ವಿರುದ್ಧ ಹೋರಾಡಿ ದೇಶದ ಸ್ವಾತಂತ್ರ್ಯಕ್ಕಾಗಿ ಅಪಾರ ತ್ಯಾಗ ಮಾಡಿದ ಮೈಸೂರು ಹುಲಿ ಹಜರತ್ ಟಿಪ್ಪು ಸುಲ್ತಾನ್ ಅವರ ದೇಶಪ್ರೇಮ, ಸಾಹಸ ಹಾಗೂ ಜನಪರ ಆಡಳಿತ ಇಂದಿನ ಯುವ ಪೀಳಿಗೆಗೆ ಸ್ಫೂರ್ತಿದಾಯಕವಾಗಿದೆ ಎಂದು ಮಾನ್ವಿ ವಿಧಾನಸಭಾ ಕ್ಷೇತ್ರದ ಶಾಸಕ ಜಿ. ಹಂಪಯ್ಯ ನಾಯಕ ಸಾಹುಕಾರ್ ಹೇಳಿದರು.

ಪಟ್ಟಣದಲ್ಲಿ ಆಯೋಜಿಸಿದ್ದ ಹಜರತ್ ಟಿಪ್ಪು ಸುಲ್ತಾನ್ ಜಯಂತಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಟಿಪ್ಪು ಸುಲ್ತಾನ್ ಅವರು ಬ್ರಿಟಿಷರ ಆಳ್ವಿಕೆ ಮತ್ತು ವಸಾಹತುಶಾಹಿ ನೀತಿಗಳ ವಿರುದ್ಧ ಧೈರ್ಯದಿಂದ ಹೋರಾಡಿದ ಅಪ್ರತಿಮ ಹೋರಾಟಗಾರರಾಗಿದ್ದರು. ತಮ್ಮ ರಾಜ್ಯದ ಸ್ವಾತಂತ್ರ್ಯ ಹಾಗೂ ಜನರ ರಕ್ಷಣೆಗಾಗಿ ಹೋರಾಡಿದ ಅವರು, ಕಠಿಣ ಸಂದರ್ಭಗಳಲ್ಲಿ ತಮ್ಮ ಮಕ್ಕಳನ್ನೇ ಒತ್ತೆಯಾಳುಗಳಾಗಿ ನೀಡುವಂತಹ ತ್ಯಾಗಕ್ಕೂ ಮುಂದಾಗಿದ್ದರು ಎಂದು ಸ್ಮರಿಸಿದರು.

ಟಿಪ್ಪು ಸುಲ್ತಾನ್ ಅವರು ಕೇವಲ ಒಬ್ಬ ರಾಜನಾಗಿರದೆ, ಜನಪರ ಚಿಂತನೆಗಳನ್ನು ಹೊಂದಿದ್ದ ಆಡಳಿತಗಾರರಾಗಿದ್ದರು. ಸಮಾಜದ ಎಲ್ಲ ವರ್ಗದ ಜನರನ್ನು ಸಮಾನವಾಗಿ ಕಾಣುವ ದೃಷ್ಟಿಕೋನ ಹೊಂದಿದ್ದ ಅವರು, ತಮ್ಮ ಆಡಳಿತದಲ್ಲಿ ವಿವಿಧ ಸಮುದಾಯಗಳ ಜನರಿಗೆ ಅವಕಾಶ ಕಲ್ಪಿಸಿದ್ದರು. ಸಮಾನತೆ, ಸಹಬಾಳ್ವೆ ಹಾಗೂ ಸೌಹಾರ್ದತೆಯ ಮೌಲ್ಯಗಳನ್ನು ಪ್ರತಿಪಾದಿಸಿದ ಅವರ ಜೀವನ ಮತ್ತು ಸಾಧನೆಗಳನ್ನು ಇಂದಿನ ಪೀಳಿಗೆಗೆ ಪರಿಚಯಿಸುವ ಅಗತ್ಯವಿದೆ ಎಂದು ತಿಳಿಸಿದರು.

ರೈತರ ಆರ್ಥಿಕ ಅಭಿವೃದ್ಧಿಗೆ ಒತ್ತು ನೀಡಿದ್ದ ಟಿಪ್ಪು ಸುಲ್ತಾನ್ ಅವರು ರೇಷ್ಮೆ ಕೃಷಿಗೆ ಪ್ರೋತ್ಸಾಹ ನೀಡುವ ಮೂಲಕ ಕೃಷಿ ಮತ್ತು ವ್ಯಾಪಾರ ಕ್ಷೇತ್ರಗಳ ಬೆಳವಣಿಗೆಗೆ ಕೊಡುಗೆ ನೀಡಿದ್ದಾರೆ. ಅಲ್ಲದೆ, ಯುದ್ಧತಂತ್ರದಲ್ಲಿ ರಾಕೆಟ್ ತಂತ್ರಜ್ಞಾನವನ್ನು ಪರಿಣಾಮಕಾರಿಯಾಗಿ ಬಳಸಿದ ಆಡಳಿತಗಾರರಲ್ಲಿ ಪ್ರಮುಖರಾಗಿದ್ದರು. ಅವರ ವೈಜ್ಞಾನಿಕ ಚಿಂತನೆ, ದೂರದೃಷ್ಟಿ ಹಾಗೂ ಆಡಳಿತಾತ್ಮಕ ಸುಧಾರಣೆಗಳು ಇತಿಹಾಸದಲ್ಲಿ ವಿಶೇಷ ಸ್ಥಾನ ಪಡೆದಿವೆ ಎಂದು ಹೇಳಿದರು.

ಮಹನೀಯರ ಜಯಂತಿಗಳು ಕೇವಲ ಆಚರಣೆಗೆ ಸೀಮಿತವಾಗಬಾರದು. ಅವರ ಜೀವನದ ಆದರ್ಶಗಳು, ದೇಶಪ್ರೇಮ, ತ್ಯಾಗ ಮತ್ತು ಸಮಾಜಮುಖಿ ಚಿಂತನೆಗಳನ್ನು ಪ್ರತಿಯೊಬ್ಬರೂ ಅಳವಡಿಸಿಕೊಳ್ಳಬೇಕು. ವಿಶೇಷವಾಗಿ ಯುವಜನತೆ ಇತಿಹಾಸವನ್ನು ಅರಿತು ಸಮಾಜದಲ್ಲಿ ಶಾಂತಿ, ಸಹೋದರತೆ ಹಾಗೂ ಸೌಹಾರ್ದತೆಯನ್ನು ಬೆಳೆಸಲು ಮುಂದಾಗಬೇಕು ಎಂದು ಶಾಸಕ ಹಂಪಯ್ಯ ನಾಯಕ ಕರೆ ನೀಡಿದರು.

ಈ ಸಂದರ್ಭದಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಅಬ್ದುಲ್ ಗಫೂರ್ ಸಾಬ್, ಪಂಚ ಗ್ಯಾರಂಟಿ ಯೋಜನೆಗಳ ಅಧ್ಯಕ್ಷ ಬಿ.ಕೆ. ಅಮರೇಶಪ್ಪ ವಕೀಲರು, ಸೈಯದ್ ಖಾಲಿದ್ ಖಾದ್ರಿ, ಸೈಯದ್ ಸಜ್ಜಾದ್ ಹುಸೇನಿ ಮತವಾಲೆ, ಎ. ಬಾಲಸ್ವಾಮಿ ಕೊಡಲಿ, ರಾಜ ಸುಭಾಷ್ ಚಂದ್ರ ನಾಯಕ, ಜಿಲಾನಿ ಖುರೇಷಿ, ಖಲೀಲ್ ಖುರೇಷಿ, ಸಿದ್ದಲಿಂಗಪ್ಪ ವಕೀಲರು, ಸೈಯದ್ ಹುಸೇನ್, ಚಾಂದ್ ಪಾಷಾ ಗುತ್ತೇದಾರ, ಎಚ್.ಬಿ.ಎಂ. ಬಾಷಾ, ಸತ್ತಾರ್ ಬಂಗ್ಲೆವಾಲೆ, ರಸೂಲ್ ಖುರೇಷಿ, ಶೇಖ್ ಮಹಿಬೂಬ್ ಖುರೇಷಿ, ಟಿಪ್ಪು ಸುಲ್ತಾನ್ ಸಂಘದ ಅಧ್ಯಕ್ಷ ಮಹಬೂಬ್ ಖುರೇಷಿ, ಇಬ್ರಾಹಿಂ ಖುರೇಷಿ, ನಾಸಿರ್ ಅಲಿ ಖುರೇಷಿ, ರೆಹಮತ್ ಅಲಿ, ಎ.ಕೆ. ಜಾಗೀರ್ದಾರ್, ಜೆ.ಎಚ್. ದೇವರಾಜ್ ಸೇರಿದಂತೆ ವಿವಿಧ ಸಂಘಟನೆಗಳ ಮುಖಂಡರು ಹಾಗೂ ಸಾರ್ವಜನಿಕರು ಉಪಸ್ಥಿತರಿದ್ದರು.