ಸಿರವಾರ: ಸಣ್ಣ ಮತ್ತು ಮಧ್ಯಮ ವರ್ಗದ ವ್ಯಾಪಾರಸ್ಥರಿಗೆ ಆರ್ಥಿಕ ನೆರವು ಒದಗಿಸುವ ಮೂಲಕ ಅವರ ಉದ್ಯಮದ ಬೆಳವಣಿಗೆಗೆ ಸಹಕಾರ ಸಂಘಗಳು ಪ್ರಮುಖ ಪಾತ್ರ ವಹಿಸಬೇಕು. ರಾಷ್ಟ್ರೀಕೃತ ಬ್ಯಾಂಕ್ಗಳಲ್ಲಿ ಸಾಲ ಪಡೆಯಲು ಅನೇಕರು ಹಲವಾರು ತೊಂದರೆಗಳನ್ನು ಎದುರಿಸುತ್ತಿದ್ದು, ಸ್ಥಳೀಯ ಸಹಕಾರ ಸಂಘಗಳು ಜನಸಾಮಾನ್ಯರಿಗೆ ಸುಲಭವಾಗಿ ಸಾಲ ಸೌಲಭ್ಯ ಕಲ್ಪಿಸಬೇಕು ಎಂದು ನವಲಕಲ್ ಬೃಹನ್ಮಠದ ಶ್ರೀ ಅಭಿನವ ಸೋಮನಾಥ ಶಿವಾಚಾರ್ಯ ಸ್ವಾಮೀಜಿ ಹೇಳಿದರು.
ಪಟ್ಟಣದಲ್ಲಿ ಆರ್.ಕೆ. ಚನ್ನಬಸವ ಸಾಹುಕಾರ ಅವರ ಸರ್ವೋದಯ ಪತ್ತಿನ ಸಹಕಾರ ಸಂಘ ನಿಯಮಿತದ ನೂತನ ಶಾಖೆಯನ್ನು ಉದ್ಘಾಟಿಸಿ ಅವರು ಆಶೀರ್ವಚನ ನೀಡಿದರು.
ಸಣ್ಣ ವ್ಯಾಪಾರಿಗಳು, ಸ್ವಯಂ ಉದ್ಯೋಗಿಗಳು ಹಾಗೂ ಮಧ್ಯಮ ವರ್ಗದ ಜನರು ತಮ್ಮ ಆರ್ಥಿಕ ಅಗತ್ಯಗಳನ್ನು ಪೂರೈಸಿಕೊಳ್ಳಲು ಬ್ಯಾಂಕ್ಗಳ ಮೇಲೆ ಅವಲಂಬಿತರಾಗಿದ್ದಾರೆ. ಆದರೆ ಸಾಲ ಪಡೆಯುವ ಪ್ರಕ್ರಿಯೆಯಲ್ಲಿ ಎದುರಾಗುವ ಅಡೆತಡೆಗಳಿಂದ ಅನೇಕರು ಸಂಕಷ್ಟ ಅನುಭವಿಸುತ್ತಿದ್ದಾರೆ. ಇಂತಹ ಸಂದರ್ಭದಲ್ಲಿ ಸ್ಥಳೀಯ ಸಹಕಾರ ಸಂಘಗಳು ಸರಳ ಹಾಗೂ ಪಾರದರ್ಶಕ ವ್ಯವಸ್ಥೆಯ ಮೂಲಕ ಅರ್ಹರಿಗೆ ಸಾಲ ಸೌಲಭ್ಯ ಒದಗಿಸಿ ಆರ್ಥಿಕ ಸ್ವಾವಲಂಬನೆಗೆ ಪ್ರೋತ್ಸಾಹ ನೀಡಬೇಕು ಎಂದು ತಿಳಿಸಿದರು.
ಹಟ್ಟಿ ಚಿನ್ನದ ಗಣಿಯ ಮಾಜಿ ಅಧ್ಯಕ್ಷ ಎನ್. ಗಿರಿಜಾಶಂಕರ ಮಾತನಾಡಿ, ಸಹಕಾರ ಸಂಘವನ್ನು ಪ್ರಾರಂಭಿಸುವುದು ಸುಲಭವಾದರೂ ಅದನ್ನು ಯಶಸ್ವಿಯಾಗಿ ಮುನ್ನಡೆಸುವುದು ದೊಡ್ಡ ಜವಾಬ್ದಾರಿಯಾಗಿದೆ. ಗ್ರಾಹಕರು ಸಂಘದಲ್ಲಿ ಇಡುವ ಠೇವಣಿ ಹಣದ ಸುರಕ್ಷತೆಗೆ ಅಧ್ಯಕ್ಷರು ಹಾಗೂ ಆಡಳಿತ ಮಂಡಳಿ ಹೊಣೆಗಾರರಾಗಿರುತ್ತಾರೆ. ಸಾಲ ವಿತರಿಸುವ ಸಂದರ್ಭದಲ್ಲಿ ಸೂಕ್ತ ದಾಖಲೆಗಳನ್ನು ಪರಿಶೀಲಿಸಿ, ಮರುಪಾವತಿ ಸಾಮರ್ಥ್ಯವನ್ನು ಪರಿಗಣಿಸಿ ಸಾಲ ನೀಡಬೇಕು ಎಂದು ಸಲಹೆ ನೀಡಿದರು.
ಸಿರಿ ಸಂಜೀವಿನಿ ಸಹಕಾರ ಸಂಘದ ಅಧ್ಯಕ್ಷ ಚುಕ್ಕಿ ಸೂಗಪ್ಪ ಸಾಹುಕಾರ ಮಾತನಾಡಿ, ಕಳೆದ ಐದು ವರ್ಷಗಳಿಗೆ ಹೋಲಿಸಿದರೆ ಪ್ರಸ್ತುತ ವ್ಯಾಪಾರ ಮತ್ತು ಆರ್ಥಿಕ ವ್ಯವಹಾರಗಳಲ್ಲಿ ಸಾಕಷ್ಟು ಬದಲಾವಣೆಗಳಾಗಿವೆ. ಇಂದಿನ ಪರಿಸ್ಥಿತಿಯಲ್ಲಿ ಸಹಕಾರ ಸಂಘಗಳನ್ನು ಸಮರ್ಥವಾಗಿ ನಿರ್ವಹಿಸುವುದು ಸವಾಲಿನ ಕೆಲಸವಾಗಿದೆ. ಸಾಲ ವಿತರಣೆ ಹಾಗೂ ಠೇವಣಿ ನಿರ್ವಹಣೆಯಲ್ಲಿ ಹೆಚ್ಚಿನ ಜವಾಬ್ದಾರಿ ಮತ್ತು ಎಚ್ಚರಿಕೆ ವಹಿಸುವುದು ಅಗತ್ಯ ಎಂದು ಹೇಳಿದರು.
ಸರ್ವೋದಯ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಎನ್. ಉದಯಕುಮಾರ ಮಾತನಾಡಿ, ಆರ್.ಕೆ. ಚನ್ನಬಸವ ಸಾಹುಕಾರ ಅವರು ಸಣ್ಣ ಮತ್ತು ಮಧ್ಯಮ ವರ್ಗದ ವ್ಯಾಪಾರಸ್ಥರಿಗೆ ಆರ್ಥಿಕ ನೆರವು ದೊರೆಯಬೇಕೆಂಬ ಆಶಯ ಹೊಂದಿದ್ದರು. ಅವರ ಆಶಯದಂತೆ ಈ ಸಹಕಾರ ಸಂಘದ ಮೂಲಕ ವ್ಯಾಪಾರಸ್ಥರು ಹಾಗೂ ಸಾಮಾನ್ಯ ಜನರಿಗೆ ಸಾಲ ಸೌಲಭ್ಯ ಒದಗಿಸಲು ಪ್ರಯತ್ನಿಸಲಾಗುವುದು. ಸಾಲ ಪಡೆಯುವ ಸದಸ್ಯರು ಸಹ ನಿಗದಿತ ಅವಧಿಯಲ್ಲಿ ಮರುಪಾವತಿ ಮಾಡುವ ಮೂಲಕ ಸಂಘದ ಅಭಿವೃದ್ಧಿಗೆ ಸಹಕರಿಸಬೇಕು ಎಂದು ತಿಳಿಸಿದರು.
ಕಾರ್ಯಕ್ರಮಕ್ಕೆ ಆಗಮಿಸಿದ್ದ ಮಾನ್ವಿ ಶಾಸಕ ಜಿ. ಹಂಪಯ್ಯ ನಾಯಕ ಅವರು ನೂತನ ಶಾಖೆಯ ಆಡಳಿತ ಮಂಡಳಿಗೆ ಶುಭಾಶಯ ಕೋರಿ, ಸಹಕಾರ ಸಂಘವು ಜನಸಾಮಾನ್ಯರ ಆರ್ಥಿಕ ಅಭಿವೃದ್ಧಿಗೆ ನೆರವಾಗಲಿ ಎಂದು ಹಾರೈಸಿದರು.
ಈ ಸಂದರ್ಭದಲ್ಲಿ ನೀಲಗಲ್ ಬೃಹನ್ಮಠದ ಶ್ರೀ ಷ.ಬ್ರ. ಡಾ. ಪಂಚಾಕ್ಷರಿ ಶಿವಾಚಾರ್ಯ ಮಹಾಸ್ವಾಮಿಗಳು, ಗಬ್ಬೂರಿನ ಬೂದಿಬಸವೇಶ್ವರ ಸಂಸ್ಥಾನ ಮಠದ ಶ್ರೀ ಷ.ಬ್ರ. ಬೂದಿಬಸವ ಶಿವಾಚಾರ್ಯ ಮಹಾಸ್ವಾಮಿಗಳು, ರಾಜಯೋಗಿನಿ ಬ್ರಹ್ಮಕುಮಾರಿ ಜ್ಯೋತಿ ಅಕ್ಕನವರು, ಸಿರವಾರದ ಮಂಜೂರ್ ಅಲ್ ಹಸನ್ ಖಾಜಿ, ರೆವರೆಂಡ್ ಸುಂದರರಾಜ್ ಸ್ಯಾಮುವೇಲ್, ರಾಯಚೂರು ಸಹಕಾರ ಸಂಘಗಳ ಉಪನಿಬಂಧಕ ಎಂ.ಆರ್. ಮನೋಹರ್, ಜೆ. ಶರಣಪ್ಪಗೌಡ, ಆರ್.ಕೆ. ಅಮರೇಶಪ್ಪ ಸಾಹುಕಾರ ಉಪಸ್ಥಿತರಿದ್ದರು.
ಸಂಘದ ಉಪಾಧ್ಯಕ್ಷ ಎನ್.ಬಿ. ಶಿವಕುಮಾರ ಸಾಹುಕಾರ, ನಿರ್ದೇಶಕರಾದ ಆರ್.ಕೆ. ಬಸವರಾಜ ಸಾಹುಕಾರ, ಕಪಗಲ್ನ ವೀರನಗೌಡ ಮಾಲಿಪಾಟೀಲ್, ಸಿರವಾರದ ಮಹೇಶ ಹಿರೇಮಠ, ನೀಲಗಲ್ ವೀರೇಶ ಸಾಹುಕಾರ, ಸೂಗಪ್ಪ ಹೂಗಾರ, ಕಲ್ಲೂರು ಬಸವರಾಜಪ್ಪ ನಾಯಕ, ಶರಣಬಸವ ಮರಾಠ, ಪರಶುರಾಮ ಸರೋದೆ, ಎಂ. ಪ್ರಕಾಶಪ್ಪ, ಅಂಗಣ್ಣ ಮಸೀದಾಪುರ ಖಾದಿಭಂಡಾರ, ನೀಲಗಲ್ ಚಂದ್ರಶೇಖರ ಸಾಹುಕಾರ, ಪಲ್ಲವಿ ಗಂ. ಕಲ್ಮಲಾ ಬಸವರಾಜಗೌಡ, ವೆಂಕಟಲಕ್ಷ್ಮೀ ಗಂ. ಎಂ. ಮುರಳಿಕೃಷ್ಣ ಹಾಗೂ ವ್ಯವಸ್ಥಾಪಕ ನಿರ್ದೇಶಕ ಗೋಪಾಲ ನಾಯಕ ಭಾಗವಹಿಸಿದ್ದರು.
ವೈ. ಅಮರೇಶಪ್ಪ, ಜೆ. ದೇವರಾಜಗೌಡ, ಅರಕೇರಿಯ ಶಿವಶರಣ ಸಾಹುಕಾರ, ಹಾಜಿ ಚೌಧರಿ, ಶಿವಶರಣಗೌಡ, ಅಯ್ಯನಗೌಡ, ಶಿವಕುಮಾರ ಕಲ್ಲೂರು, ಬಸವರಾಜ ಗಡ್ಲ, ಚನ್ನಪ್ಪ ಗಡ್ಲ ಸೇರಿದಂತೆ ಸಹಕಾರ ಸಂಘದ ಸದಸ್ಯರು, ವ್ಯಾಪಾರಸ್ಥರು ಹಾಗೂ ಸಾರ್ವಜನಿಕರು ಉಪಸ್ಥಿತರಿದ್ದರು.



