ರಾಯಚೂರು, ನ.12: ನ್ಯುಮೋನಿಯಾ ಕುರಿತು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವುದರ ಜೊತೆಗೆ ರೋಗದ ತಡೆಗಟ್ಟುವಿಕೆ, ಆರಂಭಿಕ ಹಂತದಲ್ಲಿಯೇ ಪತ್ತೆ ಹಾಗೂ ಸೂಕ್ತ ಚಿಕಿತ್ಸೆಗೆ ಹೆಚ್ಚಿನ ಆದ್ಯತೆ ನೀಡುವ ಮೂಲಕ ಮಕ್ಕಳಿಗೆ ಆರೋಗ್ಯವಂತ ಬಾಲ್ಯ ಒದಗಿಸಬೇಕು ಎಂದು ಎಲ್ಬಿಎಸ್ ನಗರದ ನಗರ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ. ಸುನೀತಾ ಹೇಳಿದರು.
ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ತಾಲೂಕು ಆರೋಗ್ಯಾಧಿಕಾರಿಗಳ ಕಚೇರಿ, ಎಲ್ಬಿಎಸ್ ನಗರ ಪ್ರಾಥಮಿಕ ಆರೋಗ್ಯ ಕೇಂದ್ರ ಹಾಗೂ ನಮ್ಮ ಕ್ಲಿನಿಕ್ಗಳ ಸಂಯುಕ್ತಾಶ್ರಯದಲ್ಲಿ ಗುರುವಾರ ಯರಮರಸ್ನ ನಮ್ಮ ಕ್ಲಿನಿಕ್ನಲ್ಲಿ ಆಯೋಜಿಸಿದ್ದ ವಿಶ್ವ ನ್ಯುಮೋನಿಯಾ ದಿನಾಚರಣೆ ಕಾರ್ಯಕ್ರಮವನ್ನು ಸಸಿಗೆ ನೀರೆರೆಯುವ ಮೂಲಕ ಉದ್ಘಾಟಿಸಿ ಅವರು ಮಾತನಾಡಿದರು.
ಪ್ರತಿವರ್ಷ ನವೆಂಬರ್ 12ರಂದು ವಿಶ್ವ ನ್ಯುಮೋನಿಯಾ ದಿನವನ್ನು ಆಚರಿಸಲಾಗುತ್ತದೆ. ನ್ಯುಮೋನಿಯಾ ರೋಗದ ಕುರಿತು ಜನರಲ್ಲಿ ಅರಿವು ಮೂಡಿಸುವುದು, ಅದರ ತಡೆಗಟ್ಟುವಿಕೆ ಮತ್ತು ಚಿಕಿತ್ಸೆಯ ಮಹತ್ವವನ್ನು ತಿಳಿಸುವುದು ಹಾಗೂ ರೋಗದಿಂದ ಉಂಟಾಗುವ ಸಾವುಗಳನ್ನು ಕಡಿಮೆ ಮಾಡುವುದು ಈ ದಿನಾಚರಣೆಯ ಪ್ರಮುಖ ಉದ್ದೇಶವಾಗಿದೆ ಎಂದು ತಿಳಿಸಿದರು.
ವಿಶೇಷವಾಗಿ ಐದು ವರ್ಷದೊಳಗಿನ ಮಕ್ಕಳು ಹಾಗೂ ವಯೋವೃದ್ಧರಲ್ಲಿ ನ್ಯುಮೋನಿಯಾ ಗಂಭೀರ ಪರಿಣಾಮ ಉಂಟುಮಾಡುವ ಸಾಧ್ಯತೆಯಿದೆ. ಆದ್ದರಿಂದ ರೋಗದ ಲಕ್ಷಣಗಳನ್ನು ನಿರ್ಲಕ್ಷಿಸದೆ, ಸಕಾಲದಲ್ಲಿ ವೈದ್ಯಕೀಯ ಚಿಕಿತ್ಸೆ ಪಡೆಯುವುದು ಅತ್ಯಂತ ಅಗತ್ಯವಾಗಿದೆ ಎಂದು ಹೇಳಿದರು.
ಕೆಮ್ಮು, ಜ್ವರ, ಬೆವರುವಿಕೆ, ಚಳಿ, ಉಸಿರಾಟದ ತೊಂದರೆ, ವೇಗವಾಗಿ ಉಸಿರಾಡುವುದು ಹಾಗೂ ಎದೆನೋವು ನ್ಯುಮೋನಿಯಾದ ಸಾಮಾನ್ಯ ಲಕ್ಷಣಗಳಾಗಿವೆ. ಆರಂಭದಲ್ಲಿ ಒಣಕೆಮ್ಮು ಕಾಣಿಸಿಕೊಂಡು ನಂತರ ಕಫದೊಂದಿಗೆ ಕೆಮ್ಮು ಉಂಟಾಗಬಹುದು. ಇಂತಹ ಲಕ್ಷಣಗಳು ಕಂಡುಬಂದಾಗ ವೈದ್ಯರನ್ನು ಸಂಪರ್ಕಿಸಬೇಕು ಎಂದು ಸಲಹೆ ನೀಡಿದರು.
ಮಕ್ಕಳಲ್ಲಿ ವೇಗವಾದ ಉಸಿರಾಟ, ಉಸಿರಾಡುವಾಗ ಎದೆಯ ಕೆಳಭಾಗ ಒಳಗೆ ಎಳೆಯುವುದು, ಆಹಾರ ಅಥವಾ ನೀರು ಸೇವಿಸಲು ತೊಂದರೆ, ನಿರ್ಜಲೀಕರಣ ಹಾಗೂ ಅತಿಯಾದ ಕಿರಿಕಿರಿಯಂತಹ ಲಕ್ಷಣಗಳು ಕಂಡುಬರಬಹುದು. ಇಂತಹ ಸಂದರ್ಭದಲ್ಲಿ ವಿಳಂಬ ಮಾಡದೆ ಸಮೀಪದ ಆರೋಗ್ಯ ಕೇಂದ್ರಕ್ಕೆ ಕರೆದುಕೊಂಡು ಹೋಗಿ ಚಿಕಿತ್ಸೆ ಕೊಡಿಸಬೇಕು ಎಂದು ತಿಳಿಸಿದರು.
ಯರಮರಸ್ ನಮ್ಮ ಕ್ಲಿನಿಕ್ನ ವೈದ್ಯಾಧಿಕಾರಿ ಡಾ. ಸಫೀಯಾ ಮಾತನಾಡಿ, ನ್ಯುಮೋನಿಯಾ ಶ್ವಾಸಕೋಶಗಳಿಗೆ ಸೋಂಕು ಉಂಟುಮಾಡುವ ಉಸಿರಾಟದ ಕಾಯಿಲೆಯಾಗಿದೆ. ಬ್ಯಾಕ್ಟೀರಿಯಾ, ವೈರಸ್ ಅಥವಾ ಶಿಲೀಂಧ್ರಗಳ ಸೋಂಕಿನಿಂದ ಈ ಕಾಯಿಲೆ ಉಂಟಾಗಬಹುದು. ಇದರಿಂದ ಶ್ವಾಸಕೋಶಗಳ ಕಾರ್ಯನಿರ್ವಹಣೆಗೆ ತೊಂದರೆಯಾಗಿ ಉಸಿರಾಟದ ಸಮಸ್ಯೆ ಕಾಣಿಸಿಕೊಳ್ಳುತ್ತದೆ ಎಂದು ವಿವರಿಸಿದರು.
ನ್ಯುಮೋನಿಯಾ ಕುರಿತು ಸಾರ್ವಜನಿಕರು, ವಿಶೇಷವಾಗಿ ಗರ್ಭಿಣಿಯರು ಹಾಗೂ ಚಿಕ್ಕಮಕ್ಕಳ ಪಾಲಕರು ಹೆಚ್ಚಿನ ಅರಿವು ಹೊಂದಿರಬೇಕು. ಮಕ್ಕಳ ಆರೋಗ್ಯದ ಬಗ್ಗೆ ನಿರಂತರ ಕಾಳಜಿ ವಹಿಸುವುದರ ಜೊತೆಗೆ ರೋಗಲಕ್ಷಣಗಳು ಕಂಡುಬಂದಲ್ಲಿ ತಕ್ಷಣ ವೈದ್ಯಕೀಯ ಸಲಹೆ ಪಡೆಯಬೇಕು ಎಂದು ಹೇಳಿದರು.
ತಾಲೂಕು ಆರೋಗ್ಯ ಶಿಕ್ಷಣಾಧಿಕಾರಿ ಸರೋಜಾ ಕೆ. ಕಾರ್ಯಕ್ರಮ ನಿರೂಪಿಸಿದರು.
ಈ ಸಂದರ್ಭದಲ್ಲಿ ಆರೋಗ್ಯ ನಿರೀಕ್ಷಣಾಧಿಕಾರಿಗಳಾದ ಬಿಬ್ಬಿ, ಬಾಚಯ್ಯ, ಸುನೀತಾ, ಶ್ವೇತಾ, ಸುಜಾತಾ, ವೀರೇಶ, ನಮ್ಮ ಕ್ಲಿನಿಕ್ ಸಿಬ್ಬಂದಿ ಹಾಗೂ ಗರ್ಭಿಣಿಯರು ಉಪಸ್ಥಿತರಿದ್ದರು.



