ದೇವದುರ್ಗ: ಸಾರ್ವಜನಿಕರ ಅಭಿಪ್ರಾಯ ಪಡೆಯದೆ ದೇವದುರ್ಗ ತಾಲೂಕಿನಿಂದ ಬೇರ್ಪಡಿಸಿ ನೂತನ ಅರಕೇರಾ ತಾಲೂಕಿಗೆ ಸೇರ್ಪಡೆಗೊಳಿಸಿರುವ ರಾಮದುರ್ಗ ಗ್ರಾಮ ಪಂಚಾಯಿತಿಯನ್ನು ಮರಳಿ ದೇವದುರ್ಗ ತಾಲೂಕಿನ ಗಟ್ಟೂರು ಹೋಬಳಿಗೆ ಸೇರಿಸಬೇಕು ಎಂದು ಒತ್ತಾಯಿಸಿ ನವೆಂಬರ್ 18ರಂದು ರಾಮದುರ್ಗ ಕ್ರಾಸ್‌ನಲ್ಲಿ ಬೃಹತ್ ರಸ್ತೆ ತಡೆ ಪ್ರತಿಭಟನೆ ನಡೆಸಲು ಗ್ರಾಮಸ್ಥರು ನಿರ್ಧರಿಸಿದ್ದಾರೆ.

ಈ ಕುರಿತು ಸಂಬಂಧಪಟ್ಟ ಅಧಿಕಾರಿಗಳಿಗೆ ಮನವಿ ಸಲ್ಲಿಸಿರುವ ರಾಮದುರ್ಗ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗ್ರಾಮಸ್ಥರು, ಆಡಳಿತಾತ್ಮಕ ಅನುಕೂಲತೆ ಹಾಗೂ ಸಾರ್ವಜನಿಕರ ಹಿತದೃಷ್ಟಿಯಿಂದ ರಾಮದುರ್ಗ ಗ್ರಾಮ ಪಂಚಾಯಿತಿಯನ್ನು ದೇವದುರ್ಗ ತಾಲೂಕಿನಲ್ಲಿಯೇ ಮುಂದುವರಿಸಬೇಕು ಎಂದು ಆಗ್ರಹಿಸಿದ್ದಾರೆ.

ಈ ಹಿಂದೆ ದೇವದುರ್ಗ ತಾಲೂಕಿನ ಗಟ್ಟೂರು ಹೋಬಳಿ ವ್ಯಾಪ್ತಿಯಲ್ಲಿದ್ದ ರಾಮದುರ್ಗ ಗ್ರಾಮ ಪಂಚಾಯಿತಿ ಹಾಗೂ ಅದರ ವ್ಯಾಪ್ತಿಯ ಕಾಕರಗಲ್, ಸುಕೇಶ್ವರಹಾಳ್ ಮತ್ತು ಜಿನ್ನಾಪೂರು ಗ್ರಾಮಗಳನ್ನು ನೂತನ ಅರಕೇರಾ ತಾಲೂಕಿಗೆ ಸೇರ್ಪಡೆಗೊಳಿಸಲಾಗಿದೆ. ಆದರೆ ಈ ನಿರ್ಧಾರ ಕೈಗೊಳ್ಳುವ ಮೊದಲು ಸ್ಥಳೀಯ ಜನರ ಅಭಿಪ್ರಾಯವನ್ನು ಪರಿಗಣಿಸಿಲ್ಲ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.

ರಾಮದುರ್ಗ ಸೇರಿದಂತೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗ್ರಾಮಗಳು ರಾಜ್ಯ ಹೆದ್ದಾರಿಗೆ ಹೊಂದಿಕೊಂಡಿದ್ದು, ದೇವದುರ್ಗ ತಾಲೂಕು ಕೇಂದ್ರ ಹಾಗೂ ಗಟ್ಟೂರು ಹೋಬಳಿ ಕೇಂದ್ರಗಳು ಸುಮಾರು 15ರಿಂದ 20 ಕಿ.ಮೀ. ವ್ಯಾಪ್ತಿಯಲ್ಲಿವೆ. ಈ ಭಾಗದ ರೈತರು, ವ್ಯಾಪಾರಸ್ಥರು ಹಾಗೂ ಸಾರ್ವಜನಿಕರು ತಮ್ಮ ದೈನಂದಿನ ವ್ಯವಹಾರ, ಕೃಷಿ ಚಟುವಟಿಕೆ ಮತ್ತು ಸರ್ಕಾರಿ ಕೆಲಸಗಳಿಗಾಗಿ ದೇವದುರ್ಗ ಹಾಗೂ ಗಟ್ಟೂರು ಕೇಂದ್ರಗಳನ್ನೇ ಅವಲಂಬಿಸಿದ್ದಾರೆ ಎಂದು ಮನವಿಯಲ್ಲಿ ವಿವರಿಸಲಾಗಿದೆ.

ಆದರೆ ಗ್ರಾಮ ಪಂಚಾಯಿತಿಯನ್ನು ಅರಕೇರಾ ತಾಲೂಕಿಗೆ ಸೇರ್ಪಡೆಗೊಳಿಸಿರುವುದರಿಂದ ಸರ್ಕಾರಿ ಕಚೇರಿಗಳಿಗೆ ತೆರಳಲು ಸಾರ್ವಜನಿಕರು ತೀವ್ರ ತೊಂದರೆ ಅನುಭವಿಸುವಂತಾಗಿದೆ. ಆಡಳಿತಾತ್ಮಕ ಕೆಲಸಗಳಿಗಾಗಿ ಹೆಚ್ಚಿನ ದೂರ ಪ್ರಯಾಣಿಸಬೇಕಾದ ಪರಿಸ್ಥಿತಿ ನಿರ್ಮಾಣವಾಗಿದ್ದು, ಇದರಿಂದ ಸಮಯ ಹಾಗೂ ಹಣ ವ್ಯರ್ಥವಾಗುತ್ತಿದೆ ಎಂದು ಗ್ರಾಮಸ್ಥರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಈ ಸಮಸ್ಯೆಯನ್ನು ಪರಿಹರಿಸುವಂತೆ ಸರ್ಕಾರಕ್ಕೆ ಈಗಾಗಲೇ ಮನವಿ ಸಲ್ಲಿಸಲಾಗಿತ್ತು. ಮನವಿಗೆ ಸ್ಪಂದಿಸಿದ್ದ ರಾಜ್ಯ ಕಂದಾಯ ಇಲಾಖೆಯ ಪ್ರಧಾನ ಕಾರ್ಯದರ್ಶಿಗಳು ರಾಮದುರ್ಗ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗ್ರಾಮಗಳ ಆಡಳಿತಾತ್ಮಕ ಸ್ಥಿತಿಗತಿ ಕುರಿತು ಸಮಗ್ರ ವರದಿ ಸಲ್ಲಿಸಲು ರಾಯಚೂರು ಜಿಲ್ಲಾಧಿಕಾರಿಗಳಿಗೆ ಸೂಚಿಸಿದ್ದರು ಎಂದು ಗ್ರಾಮಸ್ಥರು ತಿಳಿಸಿದ್ದಾರೆ.

ರಾಮದುರ್ಗ, ಕಾಕರಗಲ್, ಸುಕೇಶ್ವರಹಾಳ್ ಹಾಗೂ ಜಿನ್ನಾಪೂರು ಗ್ರಾಮಗಳ ಸಾರ್ವಜನಿಕರ ಅಭಿಪ್ರಾಯ, ಪ್ರಸ್ತುತ ಹೋಬಳಿ ವ್ಯಾಪ್ತಿ, ಹೋಬಳಿ ಕೇಂದ್ರ ಮತ್ತು ತಾಲೂಕು ಕೇಂದ್ರಗಳಿಗೆ ಇರುವ ದೂರ, ಸಾರಿಗೆ ಸಂಪರ್ಕ, ಭೌಗೋಳಿಕ ವಿಸ್ತೀರ್ಣ ಹಾಗೂ ಆಡಳಿತಾತ್ಮಕ ಅನುಕೂಲತೆಗಳನ್ನು ಪರಿಶೀಲಿಸಿ ಸ್ಪಷ್ಟ ಅಭಿಪ್ರಾಯದೊಂದಿಗೆ ವರದಿ ಸಲ್ಲಿಸುವಂತೆ ನಿರ್ದೇಶನ ನೀಡಲಾಗಿತ್ತು ಎಂದು ಮನವಿಯಲ್ಲಿ ಉಲ್ಲೇಖಿಸಲಾಗಿದೆ.

ಈ ವರದಿಯನ್ನು ರಾಯಚೂರು ಸಹಾಯಕ ಆಯುಕ್ತರ ಮೂಲಕ ಸಲ್ಲಿಸುವಂತೆ ಸೂಚಿಸಲಾಗಿದ್ದರೂ, ಸುಮಾರು ಒಂದು ವರ್ಷ ಕಳೆದರೂ ಯಾವುದೇ ಸೂಕ್ತ ಕ್ರಮ ಕೈಗೊಂಡಿಲ್ಲ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ. ಈ ವಿಷಯದಲ್ಲಿ ನಿರ್ಲಕ್ಷ್ಯ ವಹಿಸಿದ್ದಾರೆ ಎಂದು ಆರೋಪಿಸಿ ಅರಕೇರಾ ತಹಶೀಲ್ದಾರ್ ಅಮರೇಶ ಬಿರಾದರ್ ಅವರ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ. ರಾಮದುರ್ಗ ಗ್ರಾಮ ಪಂಚಾಯಿತಿಯನ್ನು ಅರಕೇರಾ ತಾಲೂಕಿಗೆ ಸೇರ್ಪಡೆಗೊಳಿಸಿರುವ ನಿರ್ಧಾರವನ್ನು ಮರುಪರಿಶೀಲಿಸಿ, ಸಾರ್ವಜನಿಕರ ಅಭಿಪ್ರಾಯ ಹಾಗೂ ಆಡಳಿತಾತ್ಮಕ ಅನುಕೂಲತೆಗಳನ್ನು ಪರಿಗಣಿಸಿ ಗಟ್ಟೂರು ಹೋಬಳಿಗೆ ಮರು ಸೇರ್ಪಡೆಗೊಳಿಸಬೇಕು. ಈ ಮೂಲಕ ರಾಮದುರ್ಗ ಗ್ರಾಮ ಪಂಚಾಯಿತಿಯನ್ನು ದೇವದುರ್ಗ ತಾಲೂಕಿನ ವ್ಯಾಪ್ತಿಯಲ್ಲಿಯೇ ಮುಂದುವರಿಸಲು ಸರ್ಕಾರ ಆದೇಶ ಹೊರಡಿಸಬೇಕು ಎಂದು ಆಗ್ರಹಿಸಿದ್ದಾರೆ.

ತಮ್ಮ ಬೇಡಿಕೆಗೆ ಸಂಬಂಧಪಟ್ಟ ಅಧಿಕಾರಿಗಳು ಸ್ಪಂದಿಸದ ಹಿನ್ನೆಲೆಯಲ್ಲಿ ನವೆಂಬರ್ 18ರಂದು ರಾಮದುರ್ಗ ಕ್ರಾಸ್‌ನಲ್ಲಿ ರಸ್ತೆ ತಡೆ ಚಳವಳಿ ಹಾಗೂ ಬೃಹತ್ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ. ರಾಮದುರ್ಗ ಗ್ರಾಮ ಪಂಚಾಯಿತಿ ವ್ಯಾಪ್ತಿಯ ರಾಮದುರ್ಗ, ಕಾಕರಗಲ್, ಸುಕೇಶ್ವರಹಾಳ್ ಮತ್ತು ಜಿನ್ನಾಪೂರು ಗ್ರಾಮಗಳ ಸಾರ್ವಜನಿಕರು ಪ್ರತಿಭಟನೆಯಲ್ಲಿ ಭಾಗವಹಿಸಲಿದ್ದಾರೆ ಎಂದು ಗ್ರಾಮಸ್ಥರು ತಿಳಿಸಿದ್ದಾರೆ.