ಜಾಲಹಳ್ಳಿ, ನ.12: ಕಳೆದ ಏಳು ತಿಂಗಳಿನಿಂದ ತಾಂತ್ರಿಕ ದೋಷದಿಂದಾಗಿ ಸ್ಥಗಿತಗೊಂಡಿರುವ ವೇತನ ಹಾಗೂ ಈ ಹಿಂದಿನ 12 ತಿಂಗಳ ಬಾಕಿ ವೇತನವನ್ನು ಕೂಡಲೇ ಪಾವತಿಸುವಂತೆ ಆಗ್ರಹಿಸಿ ಗ್ರಾಮ ಪಂಚಾಯಿತಿ ನೌಕರರು ಗುರುವಾರ ಸಿಐಟಿಯು (CITU) ನೇತೃತ್ವದಲ್ಲಿ ಗ್ರಾಮ ಪಂಚಾಯಿತಿ ಕಚೇರಿ ಎದುರು ಪ್ರತಿಭಟನೆ ನಡೆಸಿದರು.
ಗ್ರಾಮ ಪಂಚಾಯಿತಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ನೌಕರರಿಗೆ ಕಳೆದ ಏಳು ತಿಂಗಳಿನಿಂದ ತಾಂತ್ರಿಕ ಸಮಸ್ಯೆಯಿಂದ ವೇತನ ಪಾವತಿಯಾಗಿಲ್ಲ. ಇದರಿಂದ ನೌಕರರು ತೀವ್ರ ಆರ್ಥಿಕ ಸಂಕಷ್ಟ ಎದುರಿಸುವಂತಾಗಿದೆ. ಕುಟುಂಬ ನಿರ್ವಹಣೆ ಹಾಗೂ ದೈನಂದಿನ ಜೀವನಾವಶ್ಯಕ ಖರ್ಚುಗಳನ್ನು ಭರಿಸಲು ತೊಂದರೆಯಾಗುತ್ತಿದೆ ಎಂದು ಪ್ರತಿಭಟನಾಕಾರರು ಅಸಮಾಧಾನ ವ್ಯಕ್ತಪಡಿಸಿದರು.
ತಾಂತ್ರಿಕ ದೋಷದಿಂದ ಸ್ಥಗಿತಗೊಂಡಿರುವ ಏಳು ತಿಂಗಳ ವೇತನವನ್ನು ತಕ್ಷಣ ಬಿಡುಗಡೆ ಮಾಡಬೇಕು. ಇದರೊಂದಿಗೆ ಈ ಹಿಂದೆ ಬಾಕಿ ಉಳಿದಿರುವ 12 ತಿಂಗಳ ವೇತನವನ್ನೂ ಪಾವತಿಸಲು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
ಪ್ರತಿಭಟನಾ ಸ್ಥಳಕ್ಕೆ ಆಗಮಿಸಿದ ತಾಲೂಕು ಪಂಚಾಯಿತಿ ಸಹಾಯಕ ನಿರ್ದೇಶಕ ಅಂಬರೀಶ್ ಕುಂಬಾರ್ ಅವರು ನೌಕರರ ಮನವಿ ಸ್ವೀಕರಿಸಿ, ಪ್ರತಿಭಟನಾಕಾರರೊಂದಿಗೆ ಮಾತುಕತೆ ನಡೆಸಿದರು.
ತಾಂತ್ರಿಕ ದೋಷವನ್ನು ಸರಿಪಡಿಸಿ, ಸ್ಥಗಿತಗೊಂಡಿರುವ ಏಳು ತಿಂಗಳ ವೇತನವನ್ನು 20 ದಿನಗಳೊಳಗೆ ಪಾವತಿಸಲು ಕ್ರಮ ಕೈಗೊಳ್ಳುವುದಾಗಿ ಲಿಖಿತ ಭರವಸೆ ನೀಡಿದರು. ಅಧಿಕಾರಿಗಳ ಭರವಸೆಯ ಹಿನ್ನೆಲೆಯಲ್ಲಿ ನೌಕರರು ತಾತ್ಕಾಲಿಕವಾಗಿ ಪ್ರತಿಭಟನೆಯನ್ನು ಹಿಂಪಡೆದರು.
ಈ ಸಂದರ್ಭದಲ್ಲಿ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಸುನೀಲ್ ಕುಮಾರ್, ಪಂಚಾಯಿತಿ ನೌಕರರ ಸಂಘಟನೆಯ ಗೌರವಾಧ್ಯಕ್ಷ ಗಿರಿಯಪ್ಪ ಪೂಜಾರಿ, ಪದಾಧಿಕಾರಿಗಳಾದ ವೆಂಕೋಬ, ಕಾಶಿಲಿಂಗ, ಮುದ್ದುರಂಗಪ್ಪ, ಶೋಯಲ್, ನಾಗರತ್ನ, ಚನ್ನಮ್ಮ, ನಿಂಗಮ್ಮ ಸೇರಿದಂತೆ ಹಲವಾರು ನೌಕರರು ಉಪಸ್ಥಿತರಿದ್ದರು.



